Advertisement
ಹೆದ್ದಾರಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿರುವುದರಿಂದ ಹಾಗೂ ವಾಹನಗಳ ಅತಿ ವೇಗವೇ ಅಪಘಾತಕ್ಕೆ ಕಾರಣವಾಗುತ್ತಿದೆ. ಹೆದ್ದಾರಿಗೆ ಯಾವುದೇ ತಡೆಗೋಡೆ ಫೆನ್ಸಿಂಗ್ ಅಳವಡಿಸಿಲ್ಲ. ಒಂದು ಬದಿಯಿಂದ ಮತ್ತೂಂದು ಬದಿಗೆ ರಸ್ತೆ ದಾಟಲು ಸಾರ್ವಜನಿಕರು ಮುಂದಾಗುತ್ತಿದ್ದಾರೆ. ಇದರಿಂದ ವೇಗವಾಗಿ ಬರುವ ವಾಹನಗಳು ನಿಯಂತ್ರಣ ಸಾಧ್ಯವಿಲ್ಲದಿರುವುದರಿಂದ ಅಪಘಾತ ನಡೆಯುತ್ತಿವೆ.
Related Articles
Advertisement
ಅಲ್ಲದೆ, ಬೂದನೂರು ಗ್ರಾಮದ ಬಳಿ ಕಾಮಗಾರಿ ಪೂರ್ಣವಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆ ದಾಟಲು ಹೆದ್ದಾರಿಯನ್ನೇ ಆಶ್ರಯಿಸುತ್ತಿದ್ದಾರೆ. ಇದರಿಂದ ಅಪಘಾತಗಳು ಹೆಚ್ಚಿವೆ.
ವಿದ್ಯುತ್ ಕಂಬಗಳ ಗ್ರಿಲ್ ಕಳ್ಳತನ: ವಿದ್ಯುತ್ ಕಂಬಗಳಿಗೆ ಹಾಕಲಾಗಿರುವ ಕಬ್ಬಿಣದ ಅಡ್ಡಪಟ್ಟಿಗಳನ್ನು ಹಾಗೂ ಹೆದ್ದಾರಿ ತಡೆಗೋಡೆಯ ಫೆನ್ಸಿಂಗ್‌ಗಳನ್ನು ಕಳ್ಳತನ ಮಾಡಲಾಗುತ್ತಿದೆ. ಇದರಿಂದ ವಿದ್ಯುತ್ ಕಂಬಗಳು ಮಳೆ, ಗಾಳಿಗೆ ಬೀಳುವ ಪರಿಸ್ಥಿತಿಗೆ ತಲುಪಿವೆ. ಮದ್ದೂರಿನ ಬೈಪಾಸ್‌ನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ವಿದ್ಯುತ್ ಕಂಬ ಹೆದ್ದಾರಿಗೆ ಉರುಳಿ ಬಿದ್ದಿತ್ತು. ಆದರೆ, ಅದೃಷ್ಟವಶಾತ್ ವಾಹನ ಸಂಚಾರ ಕಡಿಮೆ ಇದ್ದುದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೆದ್ದಾರಿಯ ಅಲ್ಲಲ್ಲಿ ತಡೆಗೋಡೆಯ ಫೆನ್ಸಿಂಗ್‌ಗಳನ್ನು ಕಳ್ಳತನ ಮಾಡುತ್ತಿರುವುದರಿಂದ ಸಾರ್ವಜನಿಕರು ಹಾಗೂ ಪ್ರಾಣಿಗಳು ರಸ್ತೆ ದಾಟುವ ಮಾರ್ಗಗಳಾಗಿ ಬದಲಾಗಿವೆ. ಇದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ.
ರಸ್ತೆ ದಾಟಲು ಫೆನ್ಸಿಂಗ್‌ಗೆ ಕತ್ತರಿ : ಹೆದ್ದಾರಿಯ ಉದ್ದಕ್ಕೂ ಸರಿಯಾಗಿ ಅಂಡರ್ ಪಾಸ್ ನಿರ್ಮಾಣ ಮಾಡದ ಪರಿಣಾಮ ಕಿಲೋ ಮೀಟರ್‌ಗಟ್ಟಲೇ ಬಳಸಿಕೊಂಡು ಬರಬೇಕಾ ಗಿದೆ. ಇದರಿಂದ ಬೇಸತ್ತಿರುವ ಸಾರ್ವಜನಿಕರು ಕೆಲವು ಕಡೆ ಹೆದ್ದಾರಿ ರಸ್ತೆಗೆ ತಡೆಗೋಡೆಯಾಗಿ ಹಾಕಿರುವ ಕಬ್ಬಿಣದ ಫೆನ್ಸಿಂಗ್‌ಗಳನ್ನೇ ಕತ್ತರಿಸಿ, ರಸ್ತೆ ದಾಟಲು ದಾರಿ ಮಾಡಿಕೊಂಡಿದ್ದಾರೆ. ಕೆಲವು ಕಡೆ ಕಳ್ಳತನ ಮಾಡಿದ್ದಾರೆ. ಹನಕೆರೆ ಗ್ರಾಮದ ವೃತ್ತದಲ್ಲೂ ಇದೇ ಪರಿಸ್ಥಿತಿ ಮುಂದುವರೆದಿದ್ದು, ಪ್ರತಿದಿನ ಸಾರ್ವಜನಿಕರು ರಸ್ತೆ ದಾಟಲು ಈ ಮಾರ್ಗವನ್ನೇ ಅನುಸರಿಸುತ್ತಿದ್ದಾರೆ.
ಲಂಚ ಆರೋಪ: ಭೂಸ್ವಾಧೀನ ಅಧಿಕಾರಿಗೆ ತರಾಟೆ : ಹಳೇಬೂದನೂರು ಗ್ರಾಮದ ಬಳಿ ಹೆದ್ದಾರಿ ಪಕ್ಕದಲ್ಲಿ ಕುಡಿವ ನೀರು ಪೈಪ್‌ಲೈನ್ ಮತ್ತು ಚರಂಡಿ ನಿರ್ಮಾಣ ಮಾಡಲು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ, ಇದುವರೆಗೂ ಸರ್ವೀಸ್ ರಸ್ತೆಯಲ್ಲಿ ಪಾದಚಾರಿಗಳು ಓಡಾಡಲು ರಸ್ತೆ ಮಾಡಿಲ್ಲ. ಕುಡಿವ ನೀರಿಗೂ ಪೈಪ್‌ಲೈನ್ ಅಳವಡಿಸಿಲ್ಲ. ಜೊತೆಗೆ ಚರಂಡಿ ನಿರ್ಮಿಸಿಲ್ಲ ಎಂದು ಆರೋಪಿಸಿ, ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ ಲೋಕೇಶ್‌ಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡರು. ಭೂ ಸ್ವಾಧೀನಪಡಿಸಿಕೊಂಡಿರುವ ಜಾಗವನ್ನು ತೆರವುಗೊಳಿಸಲು ಲಂಚ ನೀಡಿದವರಿಗೆ ನೋಟಿಸ್ ನೀಡದೆ, ಲಂಚ ನೀಡದವರಿಗೆ ತೆರವುಗೊಳಿಸುವಂತೆ ನೋಟಿಸ್ ನೀಡಲಾಗು ತ್ತಿದೆ. ಎಲ್ಲರಿಗೂ ನೋಟಿಸ್ ನೀಡಿ, ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಕರುನಾಡು ಸೇವಕರು ಸಂಘಟನೆಯ ನೇತೃತ್ವದಲ್ಲಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಅವ್ಯವಸ್ಥೆಯ ಆಗರ: ಗ್ರಾಪಂ ಮಾಜಿ ಸದಸ್ಯ ಬಿ.ಕೆ.ಸತೀಶ್ ಮಾತನಾಡಿ, ಹೆದ್ದಾರಿ ಕಾಮಗಾರಿ ಪ್ರಾರಂಭವಾದಾಗಿನಿಂದಲೂ ಅವ್ಯವಸ್ಥೆಯ ಆಗರವಾಗಿದೆ. ಅಧಿಕಾರಿಗಳು ಲಂಚ ಕೊಟ್ಟವರಿಗೆ ಒಂದು ರೀತಿ, ಕೊಡದಿದ್ದವರಿಗೆ ಒಂದು ರೀತಿ ಮಾಡುವ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ. ಭೂ ಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲಿ ಈಗ ಕಟ್ಟಡಗಳ ನಿರ್ಮಾಣ ನಡೆಯುತ್ತಿದೆ. ಇದರಿಂದ ಮುಂದೆ ತೊಂದರೆಯಾಗಲಿದೆ. ಇದರ ಬಗ್ಗೆ ಗ್ರಾಪಂನಿಂದ ಪತ್ರ ಬರೆದಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
–ಎಚ್.ಶಿವರಾಜು