Advertisement

ಆಧುನಿಕ ಕೃಷಿ ಪದ್ಧತಿ ಅನುಸರಿಸುವ ಆಹಾರೋತ್ಪಾದನೆ ವೃದ್ಧಿಸಿ

05:01 PM Sep 03, 2017 | Team Udayavani |

ಹುಣಸೂರು: 2050ರ ವೇಳೆಗೆ ವಿಶ್ವದಲ್ಲೇ ಹೆಚ್ಚು ಜನಸಂಖ್ಯ ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಲಿದ್ದು, ಆಹಾರ ಭದ್ರತೆ ಒದಗಿಸುವ ಸಲುವಾಗಿ ಯಾಂತ್ರಿಕೃತ ಬೇಸಾಯ ಅನಿವಾರ್ಯವಾಗುವುದರಿಂದಾಗಿ ಆಧುನಿಕ ಕೃಷಿ ಪದ್ಧತಿ ಅನುಸರಿಸುವ ಮೂಲಕ ಹೆಚ್ಚಿನ ಆಹಾರೋತ್ಪಾದನೆಗೆ ಒತ್ತು ನೀಡುವಂತೆ ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್‌ ನಾಗನಾಳ ಸೂಚಿಸಿದರು.

Advertisement

ತಾಲೂಕಿನ ಬಿಳಿಕೆರೆ ಹೋಬಳಿಯ ತೆಂಕಲಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ
ಪ್ರಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿಯ ಪ್ರಗತಿ ಬಂಧು
ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಕೃಷಿ ಯಾಂತ್ರೀಕರಣ ವಿಚಾರ ಸಂಕಿರಣದಲ್ಲಿ ಮಾಹಿತಿ ನೀಡಿದ ಅವರು, ದೇಶ ಕೃಷಿ ಪ್ರಧಾನವಾಗಿದ್ದರೂ ಆಧುನಿಕ ಜೀವನ ಶೈಲಿಗೆ ಮಾರುಹೋಗಿರುವ ಯುವ
ಪೀಳಿಗೆಯಿಂದಾಗಿ ಕೃಷಿಯಿಂದ ವಿಮುಖರಾಗಿ ನಗರದತ್ತ ಗುಳೇಹೋಗುತ್ತಿದ್ದಾರೆ. ಇದರಿಂದ ಮುಂದೆ ಆಹಾರ ಕೊರತೆ ಎದುರಾಗುವ ದೃಷ್ಟಿಯಿಂದ ಹಾಗೂ ಕಾರ್ಮಿಕರ ಸಮಸ್ಯೆ ನೀಗಿಸುವ ಸಲುವಾಗಿ ಆಧುನಿಕ ಯಂತ್ರ ಬಳಸಿ, ನೂತನ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚು ಇಳುವರಿಯತ್ತ ಚಿಂತಿಸಿ, ಸರಕಾರದ
ವತಿಯಿಂದಲೇ ಕಡಿಮೆ ದರದಲ್ಲಿ ಧರ್ಮಸ್ಥಳ ಯೋಜನೆ ಸಹಕಾರದಲ್ಲಿ ಕೃಷಿ ಯಂತ್ರೋಪಕರಣ ಬಾಡಿಗೆ ಕೇಂದ್ರ ತೆರೆಯಲಾಗಿದ್ದು ಸದ್ಬಳಕೆ
ಮಾಡಿಕೊಳ್ಳಿರೆಂದರು.

ಮಹಿಳಾ ಸ್ವಾವಲಂಬಿ ಜೀವನ: ಕಾರ್ಯಾಗಾರ ಉದ್ಘಾಟಿಸಿದ ಜಿಪಂ ಸದಸ್ಯೆ ಗೌರಮ್ಮ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು
ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಜೊತೆಗೆ ಕೃಷಿ ಕ್ಷೇತ್ರದಲ್ಲೂ ರೈತರಿಗೆ
ತರಬೇತಿ-ಮಾಹಿತಿ ನೀಡುವ ಶ್ಲಾಘನೀಯ ಕಾರ್ಯನಡೆಸುತ್ತಿದೆ ಎಂದು ಪ್ರಶಂಶಿಸಿದರು.

ರೈತರಲ್ಲಿ ಜಾಗೃತಿ: ತಾಲೂಕು ಯೋಜನಾ ನಿರ್ದೇಶಕಿ ಯಶೋಧಾಶೆಟ್ಟಿ ಮಾತನಾಡಿ, ಸ್ವ ಸಹಾಯ ಯೋಜನೆ ವತಿಯಿಂದ ಗುಂಪುಗಳ ರಚನೆ, ಸಾಲ ನೀಡುವ ಉದ್ದೇಶ ಮಾತ್ರವಲ್ಲದೆ, ಕೌಶಲ್ಯಾಭಿವೃದ್ಧಿ, ಶ್ರೀ ಪದ್ಧತಿಯ ಬೇಸಾಯದ ಬಗ್ಗೆ ತರಬೇತಿ, ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಆಯೋಜಿಸುವ ಮೂಲಕ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ತೋಟಗಾರಿಕೆ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಕೃಷ್ಣಮೂರ್ತಿ ಕೃಷಿ ಯಂತ್ರೋಪ ಕರಣಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು. ಮೆಮುಲ್‌ ನಿರ್ದೇಶಕ ಕೆ.ಎಸ್‌. ಕುಮಾರ್‌ ಕೃಷಿ ಜೊತೆಗೆ ರೈತರು ಹೈನುಗಾರಿಕೆಯನ್ನು
ಅವಲಂಬಿಸಬೇಕೆಂದು ತಿಳಿಸಿದರು. ಡೇರಿ ರಾಮಕೃಷ್ಣೇಗೌಡ ಮಾತನಾಡಿದರು.

Advertisement

ನಿವೃತ್ತ ಕೃಷಿ ಅಧಿಕಾರಿ ರಾಜನ್‌, ಪ್ರಸನ್ನ ದಿವಾನ್‌ ಕೃಷಿ ಇಲಾಖೆಯಲ್ಲಿ ಸಿಗುವ ಸೌಲಭ್ಯ ಗಳ ಬಗ್ಗೆ ಮಾಹಿತಿ ನೀಡಿದರು. ಆಯರಹಳ್ಳಿಯ ಪ್ರಗತಿಪರ ರೈತ ವಿಶ್ವನಾಥ್‌ ಅನುಭವ ಹಂಚಿ ಕೊಂಡರು.

ಕಾರ್ಯಾಗಾರದಲ್ಲಿ ಗ್ರಾಪಂ ಅಧ್ಯಕ್ಷೆ ಮಹದೇವಮ್ಮ, ತಾಪಂ ಸದಸ್ಯೆ ಶಕುಂತಲಾ
ಸೋಮಶೇಖರ್‌, ಯಜನಾನರಾದ ಗೌಡಯ್ಯ, ಪುಟ್ಟಸ್ವಾಮಿಗೌಡ, ವಲಯ ಮೇಲ್ವಿಚಾರಕಾರ ಯೋಗೀಶ್‌, ವೇಣುಗೋಪಾಲ್‌, ಸ್ವಸಹಾಯ ಸಂಘ ಹಾಗೂ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next