ಬೆಂಗಳೂರು: ಕೋವಿಡ್ ಹಾವಳಿ ನಡುವೆ ಬೆಂಗಳೂರು ಸಹಜ ಸ್ಥಿತಿಯತ್ತ ಮರಳುತ್ತಿರುವ ಬೆನ್ನಲ್ಲೇ ಬಿಎಂಟಿಸಿಯಲ್ಲಿ ಪ್ರಯಾಣಿಕರ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಪಾಸುಗಳ ವಿತರಣೆ ಕಳೆದ ತಿಂಗಳಿಗೆ ಹೋಲಿಸಿದರೆ ಹೆಚ್ಚು-ಕಡಿಮೆ ದುಪ್ಪಟ್ಟಾಗಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಪಾಸುಗಳನ್ನು ಪಡೆಯುವವರೇ ಇರಲಿಲ್ಲ. ಆದರೆ, ನಿಧಾನವಾಗಿ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು ಪ್ರಾರಂಭವಾಗುತ್ತಿವೆ. ಇದಕ್ಕೆ ಪೂರಕವಾಗಿ ವರ್ಕ್ ಫ್ರಂ ಹೋಂ ನಿಯಮಗಳೂ ಸಡಿಲವಾಗಿ ಜನ ಎಂದಿ ನಂತೆ ಕೆಲಸ-ಕಾರ್ಯಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಬಸ್‌ಗಳ ಮೊರೆಹೋಗುತ್ತಿದ್ದಾರೆ.
ನಿತ್ಯ ಬಸ್‌ಗಳಲ್ಲಿ 11 ಲಕ್ಷ ಜನ ಪ್ರಯಾಣಿಸುತ್ತಿದ್ದು, ಇದರಲ್ಲಿ ಪಾಸು ಪಡೆದು ನಿಯಮಿತವಾಗಿ ಓಡಾಡುವವರ ಸಂಖ್ಯೆ ಅಂದಾಜು 90 ಸಾವಿರದಿಂದ ಒಂದು ಲಕ್ಷ ಜನ ಇದ್ದಾರೆ. ಆಗಸ್ಟ್ ನಲ್ಲಿ ಈ ಮಾದರಿಯ ಪಾಸು ಹೊಂದಿದವರ ಸಂಖ್ಯೆ 54,550 ಇತ್ತು. ಸೆಪ್ಟೆಂಬರ್‌ನಲ್ಲಿ (4ರವರೆಗೆ ಮಾತ್ರ) 72,500 ಇದ್ದು, ಇನ್ನೂ ಸಮಯ ಇರುವುದರಿಂದ 80ರಿಂದ 90 ಸಾವಿರ ಏರಿಕೆ ಆಗುವ ಸಾಧ್ಯತೆ ಇದೆ. ಜತೆಗೆ ದಿನದ ಪಾಸ್ ಬಳಕೆಯೂ ಹೆಚ್ಚುತ್ತಿದೆ. ತಿಂಗಳಿಗೆ 9 ಕೋಟಿ ಆದಾಯ ಹರಿದುಬರುತ್ತಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಕೋವಿಡ್ ಹಾವಳಿಗೂ ಮುನ್ನ ಮಾಸಿಕ ಪಾಸುಗಳಿಂದಲೇ 30-35 ಕೋಟಿ ರೂ. ಆದಾಯ ಬರುತ್ತಿತ್ತು. ಆ ಪೈಕಿ ಸದ್ಯ ಶೇ. 30 ಮಾತ್ರ ಬರುತ್ತಿದೆ. ಹಂತ-ಹಂತವಾಗಿ ಚೇತರಿಕೆ ಕಂಡುಬರಲಿದೆ. ಇನ್ನು ಬಹುತೇಕ ಕೈಗಾರಿಕೆಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಪಾಳಿ ಪದ್ಧತಿ ಅನುಸರಿಸುತ್ತಿರುವ ಕಾರಣ ಜನರ ಓಡಾಟ ಕಡಿಮೆಯಿದೆ ಎಂದರು.
ಈ ಮಧ್ಯೆ ಸಂಸ್ಥೆಯಿಂದ 300 ರೂ. ಮೊತ್ತದ ವಾರದ ಬಸ್ ಪಾಸ್ ಪರಿಚಯಿಸಿದ್ದು, ಇದಕ್ಕೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಪ್ರಸ್ತುತ ನಿತ್ಯ 11 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ತಿಳಿಸಿದರು.