ಭಾಲ್ಕಿ: ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಅಭ್ಯಾಸ ಮಾಡಿದ್ದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಬಿಕೆಐಟಿ ಪ್ರಾಂಶುಪಾಲ ಡಾ| ಎನ್.ಎಂ. ಬಿರಾದಾರ ಹೇಳಿದರು.
ಪಟ್ಟಣದ ಬಿಕೆಐಟಿ ಕಾಲೇಜಿನಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಆಯೋಜಿಸಿದ್ದ ಯುವ ಸ್ಪಂದನ ಮತ್ತು ಜೀವನ ಕೌಶಲ್ಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧಿಸ ಬೇಕಾದರೆ ಮೊದಲು ಮನಸ್ಸಿನಲ್ಲಿ ಯಾವುದೇ ಆಯಾಸ ಬರದಂತೆ ನೋಡಿಕೊಳ್ಳಬೇಕು. ಉದ್ವೇಗಕ್ಕೆ ಒಳಗಾಗದೇ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಬೆಂಗಳೂರಿನ ನಿಮ್ಹಾನ್ಸ್ ಅಧಿಕಾರಿ ಪವಿತ್ರಾ ಕೌಶಿಕ ಮಾತನಾಡಿ, ಬಿಕೆಐಟಿಯ ಯುವ ಸ್ಪಂದನ ಮತ್ತು ಜೀವನ ಕೌಶಲ್ಯ ಕಾರ್ಯಕ್ರಮದಲ್ಲಿ ಸುಮಾರು 475 ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತಸದ ವಿಷಯ. ಈ ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳು ಸ್ವಂತಿಕೆಗೆ ಹೆಚ್ಚು ಮಹತ್ವ ಕೊಡುವಂತಾಗಬೇಕು ಎಂದು ಸಲಹೆ ನೀಡಿದರು.
ಬೀದರಿನ ಯುವ ಸಮಾಲೋಚಕಿ ಸುಜಾತ ಗುಪ್ತಾ, ಬಾಲ್ಕಿ ಯುವ ಪರಿವರ್ತಕ ಅಂಬ್ರಿಶ ಸಂತಪುರೆ, ಹುಮನಾಬಾದನ ಯುವ ಪರಿವರ್ತಕಿ ಕವಿತಾ ಮಾತನಾಡಿದರು.
ಈ ವೇಳೆ ಡಾ| ಅಶೋಕಕುಮಾರ ಕೋಟಿ, ಎನ್ನೆಸ್ಸೆಸ್ ಅಧಿಕಾರಿ ಡಾ| ಬಿ.ಸೂರ್ಯಕಾಂತ ಸೇರಿದಂತೆ ಇತರರಿದ್ದರು. ಡಾ| ಸೂರ್ಯಕಾಂತ ಬರಬಾದಿ ಸ್ವಾಗತಿಸಿದರು. ಪ್ರೊ| ಗೀತಾ ಪಾಟೀಲ ನಿರೂಪಿಸಿದರು. ಸಂತೋಷ ತಪಸಾಳೆ ವಂದಿಸಿದರು.