Advertisement

ಪರಿಹಾರ ಮೊತ್ತ 3 ಪಟ್ಟು ಹೆಚ್ಚಿಸಿ: ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಸರಕಾರದ ನಿರ್ಧಾರ

12:16 AM Aug 02, 2022 | Team Udayavani |

ಬೆಂಗಳೂರು: ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಕೇಂದ್ರ ಸರಕಾರ ನೀಡು ತ್ತಿರುವ ಎನ್‌ಡಿಆರ್‌ಎಫ್ ಪರಿಹಾರದ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು ಎಂದು ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.

Advertisement

ಹಲವು ವರ್ಷಗಳ ಹಿಂದೆ ನಿಗದಿಪಡಿಸಿರುವ ಪರಿಹಾರ ಮೊತ್ತ ಈಗ ಆಗುತ್ತಿರುವ ನಷ್ಟಕ್ಕೆ ಹೋಲಿಸಲಾಗದು. ಹೀಗಾಗಿ ಮೊತ್ತ ವನ್ನು ಮೂರು ಪಟ್ಟು ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು. ಸದ್ಯವೇ ದಿಲ್ಲಿಗೆ ತೆರಳಿ ಈ ಕುರಿತು ಗೃಹ, ಹಣಕಾಸು ಮತ್ತು ಕೃಷಿ ಸಚಿವರನ್ನು ಭೇಟಿ ಮಾಡವುದಾಗಿ ಕಂದಾಯ ಸಚಿವ ಆರ್‌. ಅಶೋಕ್‌ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯ ಸರಕಾರವು ಕೇಂದ್ರದ ಎನ್‌ಡಿಆರ್‌ಎಫ್ ಪರಿಹಾರ ಮೊತ್ತಕ್ಕೆ ಅಷ್ಟೇ ಮೊತ್ತ ಸೇರಿಸಿ ನೀಡುತ್ತಿದೆ. ಮನೆ ಸಂಪೂರ್ಣ ಕುಸಿದರೆ ದೇಶದಲ್ಲೇ ಎಲ್ಲೂ ನೀಡದ 5 ಲಕ್ಷ ರೂ. ನೀಡಲಾಗುತ್ತಿದೆ. ಕೇಂದ್ರ ಸರಕಾರವು ಎನ್‌ಡಿಆರ್‌ಎಫ್ ಮೊತ್ತ ಹೆಚ್ಚಿಸಿದರೆ ರಾಜ್ಯ ಸರಕಾರಕ್ಕೆ ಹೊರೆ ಕಡಿಮೆಯಾಗುತ್ತದೆ ಎಂದರು.

ಬಗರ್‌ಹುಕುಂ ಸಾಗುವಳಿ ಜಮೀನು ಅರ್ಜಿ 57 ಸಲ್ಲಿಕೆ ಅವಕಾಶವನ್ನು ಇನ್ನೂ ಒಂದು ವರ್ಷ ವಿಸ್ತರಿಸಲು ತೀರ್ಮಾನಿಸಲಾಗಿದೆ. ಜನಪ್ರತಿನಿಧಿಗಳ ಒತ್ತಡದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಅಧಿವೇಶನದಲ್ಲಿ ಇದಕ್ಕಾಗಿ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.

ಅಕ್ರಮ-ಸಕ್ರಮಕ್ಕೆ ಅರ್ಜಿ
ರಾಜ್ಯಾದ್ಯಂತ ನಕ್ಷೆ ಉಲ್ಲಂಘನೆ ಮತ್ತು ಅನುಮೋದನೆ ಇಲ್ಲದ ಬಡಾ ವಣೆಗಳಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳ ಸಕ್ರಮಕ್ಕೆ ಸದ್ಯದಲ್ಲೇ ಅರ್ಜಿ ಕರೆಯಲಾಗುವುದು. ಇದರಿಂದ ಸರಕಾರಕ್ಕೆ 20 ಸಾವಿರ ಕೋಟಿ ರೂ.ಗಳಷ್ಟು ಆದಾಯ ಬರಲಿದೆ. ನ್ಯಾಯಾಲಯಗಳಲ್ಲಿ ಈ ಕುರಿತು ಇರುವ ಅರ್ಜಿ ಶೀಘ್ರದಲ್ಲೇ ಇತ್ಯರ್ಥಗೊಳ್ಳಲಿದ್ದು, ಅನಂತರ ದಂಡ ನಿಗದಿಪಡಿಸಿ ಅರ್ಜಿ ಸ್ವೀಕರಿಸ ಲಾಗುವುದು. ಜತೆಗೆ ಈಗಾಗಲೇ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸರಕಾರಿ ನಿವೇಶಗಳಲ್ಲಿ ನಿರ್ಮಿಸಿರುವ 2,000 ಸಾ.ಚ. ಅಡಿ ವರೆಗಿನ ವಸತಿ ಕಟ್ಟಡ ಸಕ್ರಮಕ್ಕೆ ತೀರ್ಮಾನಿಸ ಲಾಗಿದೆ. ಇದರಿಂದ ಬೆಂಗಳೂರಿನ 6 ಲಕ್ಷ ಸೇರಿ ರಾಜ್ಯದ 20 ಲಕ್ಷ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next