Advertisement

ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ ವೃದ್ಧಿ: ಮಹೇಶ್ವರ ರಾವ್‌

09:45 AM Jun 02, 2020 | mahesh |

ಉಡುಪಿ: ಕೋವಿಡ್‌ ಹಾಗೂ ಸಂಬಂಧಿತ ಲಕ್ಷಣಗಳಿರುವ ರೋಗಿಗಳ ಚಿಕಿತ್ಸೆಗಾಗಿ ಜಿಲ್ಲೆಯ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು. ಅಗತ್ಯ ವೈದ್ಯರು, ಸಿಬಂದಿ ನೇಮಕಾತಿಗೆ ಅನುಮೋದನೆ ನೀಡಲಾಗುವುದು ಎಂದು ರಾಜ್ಯ ಸರಕಾರದ ಕೈಗಾರಿಕೆ, ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮಹೇಶ್ವರ ರಾವ್‌ ತಿಳಿಸಿದ್ದಾರೆ. ಅವರು ಸೋಮವಾರ ಜಿ.ಪಂ. ಸಭಾಂಗಣದಲ್ಲಿ ಇಲಾಖಾ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸರಕಾರ ಆಸ್ಪತ್ರೆಗಳಲ್ಲಿ 2,500 ಹೆಚ್ಚುವರಿ ಹಾಸಿಗೆಗಳನ್ನು ಸೃಷ್ಟಿಸಲು ಸೂಚಿಸಿದೆ. ಈ ನಿಟ್ಟಿನಲ್ಲಿ ಹೆಚ್ಚುವರಿ ಮಾನವ ಸಂಪನ್ಮೂಲ ಅಗತ್ಯವಿದ್ದು, ಜಿಲ್ಲಾಧಿಕಾರಿಗಳ ಪ್ರಸ್ತಾವನೆಗೆ ಸರಕಾರದ ಅನುಮತಿ ನೀಡಲಾಗುವುದು ಎಂದರು.

Advertisement

ಉದ್ಯಮಿಗಳಿಗೆ ನೆರವು
ಸಣ್ಣ ಹಾಗೂ ಮಧ್ಯಮ ಕೈಗಾರಿಕೆ, ಉದ್ಯಮಿಗಳಿಗೆ ಕೇಂದ್ರ ಸರಕಾರ ಘೋಷಿಸಿರುವ ಹಣಕಾಸು ನೆರವು ಯೋಜನೆ ಜಾರಿಗೆ ಜಿಲ್ಲೆಯಲ್ಲಿ ಕೆಲವು ಖಾಸಗಿ ಬ್ಯಾಂಕ್‌ಗಳು ಸ್ಪಂದಿಸುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳ ಜತೆ ಸಭೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಈ ಬಗ್ಗೆ ಪ್ರತೀ ವಾರ ಪರಿಶೀಲನೆ ನಡೆಸುವಂತೆಯೂ ತಿಳಿಸಿದರು.

ಅಕ್ರಮ ಮರಳುಗಾರಿಕೆ: ಕೇಸು
ಅಕ್ರಮ ಮರಳುಗಾರಿಕೆ ಪ್ರಕರಣಗಳಲ್ಲಿ ಸಂಬಂಧಪಟ್ಟವರ ವಿರುದ್ಧ ಕೇಸು ದಾಖಲಿಸುವಂತೆ ಮಹೇಶ್ವರ ರಾವ್‌ ಸೂಚಿಸಿದರು. ಪಟ್ಟಾ ಜಮೀನು ಸೇರಿದಂತೆ ಲಾಕ್‌ಡೌನ್‌ ಅವಧಿಯಲ್ಲಿ ಅಕ್ರಮ ಮರಳುಗಾರಿಕೆ ನಡೆದಿರುವ ಬಗ್ಗೆ ಉಪವಿಭಾಗಾಧಿಕಾರಿಗಳು, ಪ್ರತೀ ಜಮೀನಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಬೇಕು ಎಂದು ನಿರ್ದೇಶಿಸಿದರು. ಜಿಲ್ಲಾಧಿಕಾರಿಗಳು ಈ ಬಗ್ಗೆ ವಿವರ ನೀಡಿ, ಈಗಾಗಲೇ ಇಂತಹ ಪ್ರಕರಣ ಗಳ ವಿರುದ್ಧ ಕೇಸು ದಾಖಲಿಸಲಾ ಗಿದೆ. 5 ವಾಹನಗಳನ್ನು ಜಪ್ತಿ ಮಾಡ ಲಾಗಿದೆ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದರು. ಜಿ.ಪಂ. ಸಿಇಒ ಪ್ರೀತಿ ಗೆಹಲೋತ್‌ ಉಪಸ್ಥಿತರಿದ್ದರು.

ಹೆಚ್ಚುವರಿಯಾಗಿ ಖಾಸಗಿ ಆಸ್ಪತ್ರೆ ಬಳಕೆ
ಕೋವಿಡ್‌ ಚಿಕಿತ್ಸಾ ಉಪಕರಣಗಳ ಕಾರ್ಯಕ್ಷಮತೆ ಹಾಗೂ ಸಿಬಂದಿ ತರಬೇತಿ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು. ತಾಲೂಕು ಆಸ್ಪತ್ರೆಗಳಲ್ಲಿಯೂ ವೆಂಟಿಲೇಟರ್‌ ಸೌಲಭ್ಯ ಒದಗಿಸುವುದಲ್ಲದೆ ಹೆಚ್ಚುವರಿಯಾಗಿ ಖಾಸಗಿ ಆಸ್ಪತ್ರೆಗಳನ್ನು ಇದಕ್ಕಾಗಿ ಗುರುತಿಸಬೇಕು. ಹೊರ ರಾಜ್ಯಗಳಿಂದ ಬಂದವರ ಮಾಹಿತಿ ಆಯಾ ಸ್ಥಳೀಯ ಸಂಸ್ಥೆ, ಗ್ರಾ.ಪಂ.ಗಳಲ್ಲಿ ಇರಬೇಕು. ಅವರ ಕ್ವಾರಂಟೈನ್‌ ಅವಧಿಯ ಮೇಲೆ ನಿಗಾ ಇಡಬೇಕು.
– ಮಹೇಶ್ವರ ರಾವ್‌

2-3 ದಿನಗಳಲ್ಲಿ ಪ್ರಯೋಗಾಲಯ ಪೂರ್ಣ
ಉಡುಪಿ ಜಿಲ್ಲೆಯ ಕೋವಿಡ್‌ ಪ್ರಯೋಗಾಲಯದ ಮೂಲಸೌಕರ್ಯ ಕಾಮಗಾರಿ ಅಂತಿಮ ಹಂತದಲ್ಲಿದ್ದು, 2-3 ದಿನಗಳೊಳಗೆ ಪೂರ್ಣಗೊಳ್ಳಲಿದೆ. ಬಳಿಕ ಪ್ರಯೋಗಾಲಯದಲ್ಲಿ ಅಗತ್ಯ ಉಪಕರಣಗಳ ಅಳವಡಿಕೆಯಾಗಿ, ಗಂಟಲ ದ್ರವ ಪರೀಕ್ಷೆ ಉಡುಪಿಯಲ್ಲಿಯೇ ಆರಂಭಗೊಳ್ಳಲಿದೆ.
– ಜಿ. ಜಗದೀಶ್‌, ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next