ಬೀಳಗಿ: ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಜಾನಪದವನ್ನು ಶಾಲೆ, ಕಾಲೇಜುಗಳ ಪಠ್ಯಪುಸ್ತಕದಲ್ಲಿ ಅಳವಡಿಸುವ ಮೂಲಕ ಜಾನಪದ ಉಳಿಸಿ ಬೆಳೆಸಬೇಕಾಗಿದೆ ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಡಿ.ಎಂ.ಸಾವಕಾರ ಹೇಳಿದರು.
ಬೂದಿಹಾಳ ಎಸ್.ಎ. ಗ್ರಾಮದಲ್ಲಿ ಶ್ರೀ ಗಜಾನನ ಯುವಕ ಸಂಘ ಹಾಗೂ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕ ಸಂಯುಕ್ತ ಆಶ್ರಯದಲ್ಲಿ ಗಜಾನನ ಉತ್ಸವ ಪ್ರಯುಕ್ತ ವಿಶ್ವ ಜಾನಪದ ದಿನಾಚರಣೆ ಹಾಗೂ ಜಾನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದ ಸಾಹಿತ್ಯ ಎಲ್ಲ ಸಾಹಿತ್ಯಕ್ಕೂ ತಾಯಿ ಬೇರಾಗಿದ್ದು, ನಿಂತ ನೀರಾಗದೆ ಸದಾ ಹರಿಯುವ ನೀರಾಗಿದೆ ಎಂದರು.
ಆಶುಕವಿ ಡಾ| ಸಿದ್ದಪ್ಪ ಬಿದರಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಾನಪದ ಹಾಡುಗಳ ಮೂಲಕ ಜನರನ್ನು ರಂಜಿಸಿ, ಮೂರು ದಿನದ ಸಂತೆಯಲ್ಲಿ ಎಲ್ಲರೊಂದಿಗೂ ನಮ್ಮ ಜನಪದರು ನಗುನಗುತ್ತಾ ಸುಖವಾಗಿ ಬಾಳಿ ಬದುಕಿದರು. ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವದಿಂದ ಇಂದಿನ ಜನ ಸಮೂಹ ದಾರಿ ತಪ್ಪುತ್ತಿದೆ ಎಂದರು.
ಜಾನಪದ ಕಲಾವಿದ ಚಿನ್ನಪ್ಪಗೌಡ ಗಿಡ್ಡಪ್ಪಗೋಳ ಹಂತಿ ಹಾಡು ಹೇಳುತ್ತ, ಜನಪದ ಸಾಹಿತ್ಯಕ್ಕೆ ಬಹುದೊಡ್ಡ ಶಕ್ತಿಯಿದ್ದು, ಜನಪದ ಸಾಹಿತ್ಯ ಉಳಿಸಿ ಬೆಳೆಸಬೇಕು ಎಂದು ಹೇಳಿದರು.ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಬಸವರಾಜ ದಾವಣಗೆರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದದಲ್ಲಿ 176 ಕಲೆ ಬರುತ್ತಿದ್ದು, ಅವುಗಳನ್ನು ಪ್ರೀತಿಸಿ, ಪ್ರೋತ್ಸಾಹಿಸಬೇಕೆಂದು ಹೇಳಿದರು.
ಅಶೋಕ ವಜ್ಜರಮಟ್ಟಿ, ವಿ. ಜಿ. ಪಾಟೀಲ, ಸದಾಶಿವ ಆಗೋಜಿ, ಶೇಖರ ತೋಳಮಟ್ಟಿ, ಪುಟ್ಟು ಹಿರೇಮಠ, ಸುರೇಶ ಜಿದ್ದಿಮನಿ, ರಾ. ಹ. ಕೊಂಡಕೇರ, ನಿಂಗಪ್ಪ ಅಂಟೀನ, ಈರಣ್ಣ ಕುಟಕನಕೇರಿ ಇದ್ದರು. ಎಸ್. ಬಿ. ಜಾಡರ ನಿರೂಪಿಸಿ, ವಂದಿಸಿದರು.