ಬೆಂಗಳೂರು: ಚುನಾವಣಾ ಪ್ರಚಾರಕ್ಕಾಗಿ ರಾಜ್ಯದ ಜನರ ಸುರಕ್ಷತೆಯನ್ನು ಪಣಕ್ಕಿಡಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇದಕ್ಕಾಗಿ “ನಮ್ಮ ಮೆಟ್ರೋ’ ವಿಸ್ತರಿತ ಮಾರ್ಗ ಸೇರಿದಂತೆ ಅಪೂರ್ಣಗೊಂಡ ಯೋಜನೆಗಳಿಗೆಲ್ಲಾ ಚಾಲನೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು.
“ನಮ್ಮ ಮೆಟ್ರೋ’ 2ನೇ ಹಂತ ಯೋಜನೆ ವಿಸ್ತರಿತ ಮಾರ್ಗ ಕೆ.ಆರ್. ಪುರಂ- ವೈಟ್ ಫೀಲ್ಡ್ ನಡುವೆ ಮೆಟ್ರೋ ಸಂಚಾರಕ್ಕೆ ಮಾ.25ರಂದು ಪ್ರಧಾನಿ ಚಾಲನೆ ನೀಡಲಿದ್ದಾರೆ. ಆದರೆ, ಅವಘಡಗಳು ಸಂಭವಿಸಿದಾಗ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರಲು ಕೆಲವೆಡೆ ನಿರ್ಗಮನ ಮಾರ್ಗ ಇಲ್ಲದಿರುವುದು, ಗರುಡಾಚಾರಪಾಳ್ಯದಿಂದ ಕೆ.ಆರ್.ಪುರಂ ನಡುವೆಜೋಡಿ ಮಾ ರ್ಗ ಇಲ್ಲದಿರುವುದು ಸೇರಿದಂತೆ ಸುಮಾರು 58 ಪ್ರಮುಖ ನ್ಯೂನತೆಗಳಿಂದ ಕೂಡಿದೆ. ಇದನ್ನು ಸ್ವತಃ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಗುರುತಿಸಿ, ಲಿಖೀತವಾಗಿ ನೀಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದಲ್ಲದೆ, ಉದ್ದೇಶಿತ ಮಾರ್ಗವು ಇತ್ತ ಬೈಯಪ್ಪನಹಳ್ಳಿಯ ನೇರಳೆ ಮಾರ್ಗವನ್ನೂ ಸಂಧಿಸುವುದಿಲ್ಲ. ಅತ್ತ ವೈಟ್‌ಫೀಲ್ಡ್‌ನಿಂದ ಮುಂದೆ ಹೋಗುವವರಿಗೂ ಸಂಪರ್ಕ ಕಲ್ಪಿಸುವುದಿಲ್ಲ. ಕೆ.ಆರ್ .ಪುರಂ-ಬೈಯಪ್ಪನಹಳ್ಳಿ ನಡುವೆ ಬಸ್ ಸಂಪರ್ಕ ಕಲ್ಪಿಸುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಬಿಎಂಟಿಸಿಯಲ್ಲೇ ಸಾವಿರಾರು ಬಸ್‌ಗಳ ಕೊರತೆ ಇದೆ. ಇನ್ನು ಉದ್ದೇಶಿತ ನೂತನ ಮಾರ್ಗದಲ್ಲಿ ರೈಲಿನ ನಿಗದಿತ ವೇಗ ಹಾಗೂ ಅನುಮೋದಿತ ವೇಗಕ್ಕೆ ಹೊಂದಾಣಿಕೆ ಆಗುತ್ತಿಲ್ಲ. ಆದಾಗ್ಯೂ ತರಾತುರಿಯಲ್ಲಿ ಲೋಕಾರ್ಪಣೆ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.
ಸರ್ಕಾರದ ಮುಂದೆ ಯಾವುದೇ ಸಾಧನೆಗಳಿಲ್ಲ. ಚುನಾವಣಾ ಪ್ರಚಾರಕ್ಕಾಗಿ ಜನರ ಸುರಕ್ಷತೆಯನ್ನೇ ಪಣಕ್ಕಿಡಲು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿರುವುದು ಎಷ್ಟು ಸರಿ? ನ್ಯೂನತೆಗಳನ್ನು ಸರಿಪಡಿಸುವ ಮೊದಲೇ ಲೋಕಾರ್ಪಣೆ ಮಾಡುತ್ತಿರುವುದರ ಹಿಂದಿನ ಉದ್ದೇಶ ಏನು? ನಿಮ್ಮ (ಬಿಜೆಪಿಯ) ಸ್ವಾರ್ಥಕ್ಕೆ ಬೆಂಗಳೂರಿನ ನಾಗರಿಕರ ಜೀವವನ್ನು ಪಣಕ್ಕಿಡುತ್ತಿರುವುದು ಯಾಕೆ
ಎಂದು ಸುರ್ಜೇವಾಲ ಪ್ರಶ್ನೆಗಳ ಸುರಿಮಳೆಗರೆದರು.