Advertisement

DKಗೆ ಶಾಕ್ ಮೇಲೆ ಶಾಕ್, ITಗೆ ಚಳ್ಳೆಹಣ್ಣು ತಿನ್ನಿಸಲು ಜ್ಯೋತಿಷಿ ಯತ್ನ

03:54 PM Aug 03, 2017 | Team Udayavani |

ಬೆಂಗಳೂರು: ಗುಜರಾತ್ ಶಾಸಕರಿಗೆ ಈಗಲ್ ಟನ್ ರೆಸಾರ್ಟ್ ನಲ್ಲಿ ಆತಿಥ್ಯ ನೀಡಿದ ಬೆನ್ನಲ್ಲೇ ರಾಜ್ಯದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ, ಸಂಸದ ಡಿಕೆ ಸುರೇಶ್, ಸಂಬಂಧಿ ರವಿ, ಮಾವ ತಿಮ್ಮಯ್ಯ ಸಹಿತ ಸ್ನೇಹಿತರ ನಿವಾಸ, ಕಚೇರಿ ಸೇರಿ 30ಕ್ಕೂ ಅಧಿಕ ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಏಕಾಏಕಿ ದಾಳಿ ನಡೆಸಿದ್ದು, ಗುರುವಾರವೂ ಕೂಡಾ ಡಿಕೆಶಿ ಹಾಗೂ ಆಪ್ತರ ನಿವಾಸಗಳ ಮೇಲಿನ ದಾಳಿ ಮುಂದುವರಿದಿದೆ.  ನಿನ್ನೆಯ ದಾಳಿಯ ವೇಳೆಯೂ ಹಲವು ಊಹಾಪೋಹದ ಸುದ್ದಿಗಳು ಹರಿದಾಡುತ್ತಿದ್ದವು. ಇಂದು ಕೂಡಾ ಅದೇ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಆದರೆ ಐಟಿ ಅಧಿಕಾರಿಗಳು ಈವರೆಗೂ ಯಾವುದೇ ಖಚಿತ ಮಾಹಿತಿ ನೀಡಿಲ್ಲ.

Advertisement

ಐಟಿ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಡಿಕೆಶಿ ಆಪ್ತ ಗುರೂಜಿ?

ಐಟಿ ದಾಳಿಗೊಳಗಾದ ಡಿಕೆಶಿ ಅವರ ಆಪ್ತ ಜ್ಯೋತಿಷಿ ದ್ವಾರಕನಾಥ ಅವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿದೆ. ಐಟಿ ಅಧಿಕಾರಿಗಳ ದಾಳಿ ನಂತರ ದ್ವಾರಕನಾಥ ತಮ್ಮ ಮನೆಯ ಹಿಂದಿನ 2 ಗೇಟ್ ಗಳನ್ನು ತೆರೆದು ಅದರಲ್ಲಿ ಮಹತ್ವದ ದಾಖಲೆ ಪತ್ರಗಳನ್ನು ಸಾಗಾಟ ಮಾಡಿಸಿದ್ದಾರೆನ್ನಲಾಗಿದೆ.

ಡಿಕೆಶಿ ಪರ ಕಾಂಗ್ರೆಸ್ ಒಗ್ಗಟ್ಟಿನ ಮಂತ್ರ:

ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ, ಸಚಿವ ಡಿಕೆ ಶಿವಕುಮಾರ್ ನಿವಾಸ, ಕಚೇರಿ, ಸಂಬಂಧಿಕರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿಯನ್ನು ಕಾಂಗ್ರೆಸ್ ಪಕ್ಷ ಬಲವಾಗಿ ಖಂಡಿಸಿದೆ. ಅಲ್ಲದೇ ಸಚಿವ ಡಿಕೆಶಿಯನ್ನು ಬೆಂಬಲಿಸುವಂತೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯೂ ಕಟ್ಟಪ್ಪಣೆ ವಿಧಿಸಿದ್ದಾರೆನ್ನಲಾಗಿದೆ. ರಾಜ್ಯದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಂಯ್ಯ ಸೇರಿದಂತೆ ಎಲ್ಲಾ ಶಾಸಕರು, ಸಚಿವರು, ವಿಧಾನಪರಿಷತ್ ಸದಸ್ಯರು ಡಿಕೆಶಿಯನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

Advertisement

ಡಿಕೆಶಿ ಮನೆ, ಕಚೇರಿಗಳಲ್ಲಿ 11.43 ಕೋಟಿ ವಶ, ಮೈಸೂರಿನಲ್ಲಿರುವ ಮಾವ ತಿಮ್ಮಯ್ಯನವರ ಮನೆಯಲ್ಲಿ 60 ಲಕ್ಷ ಹಾಗೂ ನವದೆಹಲಿಯ ಡಿಕೆಶಿ ಮನೆಯಲ್ಲಿ 8.33 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

ಸಿಂಗಾಪುರ ಸೇರಿದಂತೆ ವಿದೇಶದಲ್ಲೂ ಡಿಕೆಶಿ ಹೂಡಿಕೆ ಪತ್ತೆ?

ಡಿಕೆ ಶಿವಕುಮಾರ್ ಅವರು ಸಿಂಗಾಪುರ ಸೇರಿದಂತೆ ವಿದೇಶಗಳಲ್ಲಿ ಹೂಡಿಕೆ ಮಾಡಿರುವುದು ಕೆಲ ದಾಖಲೆಗಳಿಂದ ಪತ್ತೆಯಾಗಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈ ಬಗ್ಗೆ ಐಟಿ ಅಧಿಕಾರಿಗಳು ಸುದೀರ್ಘವಾಗಿ ವಿಚಾರಣೆ, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿ ವಿವರಿಸಿದೆ.

ಮ್ಯಾರಥಾನ್ ದಾಳಿ ಸಾಧ್ಯತೆ?

ಬುಧವಾರ ಬೆಳಗ್ಗೆಯಿಂದ ಐಟಿ ಅಧಿಕಾರಿಗಳು ನಿರಂತರವಾಗಿ ಡಿಕೆ ಶಿವಕುಮಾರ್ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿದ್ದರು. ಗುರುವಾರವೂ ಕೂಡಾ ಶೋಧ ಕಾರ್ಯ ಮುಂದುವರಿದಿದ್ದು, ಡಿಕೆಶಿ ಒಡೆತನದ ಗ್ಲೋಬಲ್ ಕಾಲೇಜು ಮೇಲೂ ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಕಾವೇರಿ ಭವನದಲ್ಲಿರುವ  ಕೆಪಿಟಿಸಿಎಲ್, ಕೆಪಿಸಿಎಲ್  ಕಚೇರಿ ಮೇಲೂ ದಾಳಿ ಸಾಧ್ಯತೆ, ವಿಧಾನಸೌಧದ ಕಚೇರಿ ಮೇಲೂ ದಾಳಿ ನಡೆಯುವ ಸಾಧ್ಯತೆ ಇದ್ದಿರುವುದಾಗಿ ವರದಿಗಳು ತಿಳಿಸಿವೆ.

ಡಿಕೆಶಿ ಕಂಗಾಲು:

ಬುಧವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಈಗಲ್ ಟನ್ ರೆಸಾರ್ಟ್ ನಿಂದ ಸದಾಶಿವನಗರದ ಕೆಂಕೇರಿ ನಿವಾಸಕ್ಕೆ ವಿಚಾರಣೆಗಾಗಿ ಡಿಕೆಶಿ ಅವರನ್ನು ಕರೆತಂದಾಗ ಮನೆಯ ಎದುರು ಜಮಾಯಿಸಿದ್ದ ಕಾರ್ಯಕರ್ತರತ್ತ ಕೈ ಬೀಸಿ ಏನೂ ಆಗಲ್ಲ ಎಂದು ಸಮಾಧಾನದ ಭಾವ ಪ್ರದರ್ಶಿಸಿದ್ದರು. ಆದರೆ ದಾಳಿಯಿಂದ ಮುಖದಲ್ಲಿ ದುಗುಡ ಕಂಡುಬಂದಿತ್ತು. ಆದರೆ ಗುರುವಾರ ಡಿಕೆಶಿ ಮನೆಯಿಂದ ಹೊರಗೆ ಬಂದಿಲ್ಲ. ಐಟಿ ಅಧಿಕಾರಿಗಳ ಇಂಚಿಂಚು ಶೋಧ, ದಾಳಿಯಿಂದಾಗಿ ಡಿಕೆಶಿ ಹಾಗೂ ಕುಟುಂಬ ಕಂಗಾಲಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

2 ಸೂಟ್ ಕೇಸ್ ಭರ್ತಿ ದಾಖಲೆ ವಶ

ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ಅವರ ನಿವಾಸದಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭರ್ತಿ 2 ಸೂಟ್ ಕೇಸ್ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next