ಬೆಂಗಳೂರು: ನವರಾತ್ರಿ ಆಚರಣೆಯ ಮೊದಲ ದಿನದಂದೇ ಐಟಿ ( ಆದಾಯ ತೆರಿಗೆ) ಅಧಿಕಾರಿಗಳು ಹಲವೆಡೆ ದಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕ ಉಮೇಶ್ ಅವರ ರಾಜಾಜಿನಗರದ ಮನೆ ಮೇಲೆ ದಾಳಿ ನಡೆದಿದೆ. ವೃತ್ತಿಯಲ್ಲಿ ಚಾಲಕನಾಗಿದ್ದ ಉಮೇಶ್ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿ ಕೆಲಸ ನಿರ್ವಹಣೆಗೆ ನಿಯೋಜನೆಗೊಂಡಿದ್ದರು. ಬಿ.ಎಸ್. ಯಡಿಯೂರಪ್ಪ ಅವರ ಪುತ್ರರಾದ ಬಿ. ವೈ. ವಿಜಯೇಂದ್ರ ಹಾಗೂ ರಾಘವೇಂದ್ರ ಬಳಿಯೂ ಆಪ್ತರಾಗಿ ಗುರುತಿಸಿಕೊಂಡಿದ್ದರು. ಉಮೇಶ್ ಮನೆ ಸೇರಿದಂತೆ ಅವರ ಆಪ್ತರ ಮನೆಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ವರದಿಯಾಗಿದೆ.
ಇದನ್ನೂ ಓದಿ:ತಾರೆಯರ ನವರಾತ್ರಿ ವೈಭವ: ಹಬ್ಬದ ಮೂಡ್‌ನಲ್ಲಿ ನಟಿಯರು
ಹೆಗಡೆ ನಗರದಲ್ಲಿರುವ ಎನ್.ಆರ್.ರಾಯಲ್ ಅಪಾರ್ಟ್‍ಮೆಂಟ್‍ನ ಜಲಸಂಪನ್ಮೂಲ ಇಲಾಖೆಯ ಲೆಕ್ಕಪರಿಶೋಧಕರ ಮನೆ ಹಾಗೂ ಸಹಕಾರನಗರದಲ್ಲಿರುವ ರಾಹುಲ್ ಎಂಟರ್ ಪ್ರೈಸಸ್ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಶೋಧ ಹಾಗೂ ಜಪ್ತಿ ಕಾರ್ಯಾಚರಣೆ ನಡೆಸಲಾಗಿದೆ.
ಬೆಳಗ್ಗೆ ಐದು ಗಂಟೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಿ.ಎಸ್. ವೈ ಆಪ್ತ ಸಹಾಯಕ ಉಮೇಶ್ ಅವರ ಸಂಬಂಧಿಕರ ಆರು ಮನೆಗಳ ಮೇಲೆ ಕೂಡ ದಾಳಿ ನಡಸಲಾಗಿದೆ.