Advertisement

ಆದಾಯ ತೆರಿಗೆ ಮಿತಿ ಈಗಿನ 2.50 ಲಕ್ಷದಿಂದ 5 ಲಕ್ಷಕ್ಕೆ ಏರುವ ಸಾಧ್ಯತೆ

01:38 PM Jan 21, 2019 | Team Udayavani |

ಹೊಸದಿಲ್ಲಿ  : ಲೋಕಸಭಾ ಚುನಾವಣೆಯತ್ತ ಮುಖ ಮಾಡಿರುವ ಬಿಜೆಪಿ ನೇತೃತ್ವದ ಕೇಂದ್ರದಲ್ಲಿನ ಎನ್‌ಡಿಎ ಸರಕಾರ ಈ ಬಾರಿ, ಮಾಸಿಕ ವೇತನ ಪಡೆಯುವ ವರ್ಗದವರ ಖಾಸಗಿ ಆದಾಯ ತೆರಿಗೆ ಮಿತಿಯನ್ನು ಈಗಿನ 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಏರಿಸಲಿದೆ ಎಂದು ಮೂಲಗಳು ತಿಳಿಸಿವೆ. 

Advertisement

ಈಗಿನ ನಿಯಮದ ಪ್ರಕಾರ ತಿಂಗಳ ವೇತನದಾರರ 2.50 ಲಕ್ಷ ರೂ. ವರೆಗಿನ ವಾರ್ಷಿಕ ಆದಾಯವು ತೆರಿಗೆ-ಮುಕ್ತವಾಗಿದೆ. ಅನಂತರದ 2.50 ಲಕ್ಷ ರೂ.ವರೆಗಿನ ಆದಾಯವು ಶೇ.5ರ ತೆರಿಗೆಗೆ ಒಳಪಡುತ್ತಿದೆ. 5ರಿಂದ 10 ಲಕ್ಷ ರೂ. ವರೆಗಿನ ವಾರ್ಷಿಕ ಆದಾಯ ಇರುವ ವೇತನದಾರರ ಮೇಲೆ ಶೇ.20 ಆದಾಯ ತೆರಿಗೆ ಬೀಳುತ್ತಿದೆ. 10 ಲಕ್ಷ ರೂ. ಮೀರಿದ ವಾರ್ಷಿಕ ಆದಾಯ ಹೊಂದಿರುವ ವೇತನದಾರರ ಮೇಲೆ ಶೇ.30 ಆದಾಯ ತೆರಿಗೆ ಇದೆ. 

ಪ್ರಕೃತ 5 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯ ತೆರಿಗೆ-ಮುಕ್ತವಾಗಿರುವುದು ಕೇವಲ 80 ವರ್ಷ ದಾಟಿದವರ ಸಂದರ್ಭದಲ್ಲಿ ಮಾತ್ರ. 

ಕೇಂದ್ರ ಸರಕಾರವು ಈಚೆಗೆ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಜನರಲ್‌ ಕೆಟಗರಿಯಲ್ಲಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರ ಮೀಸಲಾತಿಯನ್ನು ಕಲ್ಪಿಸಿದ್ದು ಇದಕ್ಕೆ ಅರ್ಹತೆ ಪಡೆಯುವವರ ವಾರ್ಷಿಕ ಆದಾಯ 8 ಲಕ್ಷ ರೂ.ಗಳಿಗಿಂತ ಕಡಿಮೆ ಇರಬೇಕಾಗುತ್ತದೆ. 

ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರಕಾರ ಈ ಬಾರಿ ತಿಂಗಳ ವೇತನದಾರರ ತೆರಿಗೆ-ಮುಕ್ತ  ವಾರ್ಷಿಕ ಆದಾಯದ ಮಿತಿಯನ್ನು ಈಗಿನ 2.50 ಲಕ್ಷ  ರೂ.ದಿಂದ 5 ಲಕ್ಷ ರೂ.ಗೆ ಏರಿಸಲು ನಿರ್ಧರಿಸಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ಹೇಳಿವೆ. 

Advertisement

ಜನಸಾಮಾನ್ಯರು ಕೂಡ ಸರಕಾರದಿಂದ ಇದೇ ಕೊಡುಗೆಯನ್ನು ಕಳೆದ ಕೆಲ ವರ್ಷದಿಂದ ನಿರೀಕ್ಷಿಸುತ್ತಿದ್ದಾರೆ. ಹಾಗೆ ಮಾಡಿದಲ್ಲಿ ತಮಗೆ ಭವಿಷ್ಯತ್ತಿಗಾಗಿ ಹಣ ಉಳಿಸಲು ಸಾಧ್ಯವಾದೀತು ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ. 

ಮಾತ್ರವಲ್ಲದೆ ಸರಕಾರದ ಈ ಉಪಕ್ರಮದಿಂದ ಹೂಡಿಕೆ ಪ್ರಮಾಣ ಹೆಚ್ಚುವುದಲ್ಲದೆ ದೇಶದ ಆರ್ಥಿಕತೆಯಲ್ಲಿನ ನಗದು ಹರಿವು ಕೂಡ ಹೆಚ್ಚುತ್ತದೆ ಎಂದು ಪರಿಣತರು ಅಭಿಪ್ರಾಯಪಡುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next