ಬೆಂಗಳೂರು:ಶಾಸಕ ಎಂಟಿಬಿ ನಾಗರಾಜ್ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದ ಸಂದರ್ಭದಲ್ಲಿ ಕೋಟಿ, ಕೋಟಿ ರೂಪಾಯಿ ಭಾರೀ ಪ್ರಮಾಣದ ಆಸ್ತಿ ಪತ್ತೆಯಾಗಿರುವುದಾಗಿ ಐಟಿ ಇಲಾಖೆಯ ಉನ್ನತ ಮೂಲಗಳು ತಿಳಿಸಿರುವುದಾಗಿ ಖಾಸಗಿ ಟಿವಿ ಚಾನೆಲ್ ಗಳ ವರದಿ ತಿಳಿಸಿದೆ.
ಇತ್ತೀಚೆಗಷ್ಟೇ ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾಗರಾಜ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸುಮಾರು 560 ಎಕರೆಗೆ ಸಂಬಂಧಿಸಿದಂತೆ 3,500 ಭೂ ದಾಖಲೆ ಪತ್ರ ವಶಕ್ಕೆ ತೆಗೆದುಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
120 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಪಾಸ್ತಿ ಪತ್ತೆ ಹಚ್ಚಿರುವುದಾಗಿ ವರದಿ ವಿವರಿಸಿದೆ. ಐಟಿ ಅಧಿಕಾರಿಗಳ ದಾಳಿ ವೇಳೆ 10 ಕೆಜಿ ಚಿನ್ನ, 1.10 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ಹೇಳಿದೆ.
ನಗರದ ಗರುಡಾಚಾರ್ ಪಾಳ್ಯದಲ್ಲಿನ ಎಂ.ಟಿ.ಬಿ.ನಾಗರಾಜ್ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದು, ತಡರಾತ್ರಿವರೆಗೆ ದಾಖಲೆಗಳ ಪರಿಶೀಲನೆ ನಡೆಸಿದ್ದರು.