ಚೆನ್ನೈ : ಆದಾಯ ತೆರಿಗೆ ಇಲಾಖಾಧಿಕಾರಿಗಳು ಇಂದು ತಮಿಳು ನಾಡು ಮತ್ತು ಮಧುರೆಯಲ್ಲಿ ವಿವಿಧ ಉದ್ಯಮ ಸಮೂಹಗಳಿಗೆ ಸೇರಿದ ಸುಮಾರು 33 ತಾಣಗಳ ಮೇಲೆ ದಾಳಿ ನಡೆಸಿದರು.
ಜೈಲು ಪಾಲಾಗಿರುವ ಎಐಎಡಿಎಂಕೆ ನಾಯಕಿ ವಿ ಕೆ ಶಶಿಕಲಾ ಅವರ ಕುಟುಂಬ ಮತ್ತು ಉದ್ಯಮ ಸಂಸ್ಥೆಗಳ ಮೇಲೆ ಈಚೆಗೆ ನಡೆದಿದ್ದ ಐಟಿ ದಾಳಿ ಮತ್ತು ಶೋಧ ಕಾರ್ಯಾಚರಣೆಯ ಮುಂದುವರಿಕೆಯಾಗಿ ಇಂದಿನ ದಾಳಿಗಳು ನಡೆದಿವೆ ಎಂದು ಹಿರಿಯ ಐಟಿ ಅಧಿಕಾರಿಯೋರ್ವರು ತಿಳಿಸಿದ್ದಾರೆ.
“ಶೋಧ ಕಾರ್ಯಾಚರಣೆ ಮತ್ತು ದಾಳಿಗಳು ಈಗಲೂ ಮುಂದುವರಿದಿವೆ. ಅಧಿಕಾರಿಗಳು ಮಾರ್ಗ್ ಗ್ರೂಪ್, ಎಸ್2 ಮತ್ತು ಮಿಲೇನಿಯಂ ಸಂಸ್ಥೆಗಳ ಆವರಣಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ತಮ್ಮ ಗುರುತು ಬಹಿರಂಗಪಡಿಸದಿರುವ ಶರತ್ತಿನ ಮೇಲೆ ಹಿರಿಯ ಐಟಿ ಅಧಿಕಾರಿ ಐಎಎನ್‌ಎಸ್ ಗೆ ತಿಳಿಸಿದ್ದಾರೆ.
ಶಶಿಕಲಾ ಅವರ ಸಂಬಂಧಿಗಳು ಮತ್ತು ಆಕೆಯೊಂದಿಗೆ ಔದ್ಯಮಿಕ ನಂಟು ಹೊಂದಿರುವ ಸಂಸ್ಥೆಗಳ ಸುಮಾರು 187 ತಾಣಗಳ ಮೇಲೆ ಐಟಿ ದಾಳಿ, ಶೋಧ ಕಾರ್ಯಾಚರಣೆ ನಡೆಯುತ್ತಿರುವುದಾಗಿ ಅವರು ತಿಳಿಸಿದರು.
1,430 ಕೋಟಿ ರೂ. ತೆರಿಗೆ ವಂಚನೆಯನ್ನು ಪತ್ತೆ ಹಚ್ಚಲಾದ ದಾಳಿಗಳು ನಡೆದ ಒಂದು ದಿನದ ತರುವಾಯ ಇಂದಿನ ದಾಳಿಗಳು ನಡೆದಿರುವುದು ರಾಜ್ಯಾದ್ಯಂತ ಸಂಚಲನ ಮೂಡಿಸಿ, ಕುತೂಹಲ ಕೆರಳಿಸಿದೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಜೆ ಜಯಲಲಿತಾ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ ಎಂದು ಅಧಿಕಾರಿ ಹೇಳಿದರು.