ನವದೆಹಲಿ: “ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂಬ ಆಮಿಷಗಳಿಗೆ ಬಲಿಯಾಗದಿರಿ. ಸ್ಟಾಫ್ ಸೆಲೆಕ್ಷನ್ ಕಮಿಷನ್ ಅಥವಾ ಇಲಾಖೆಯ ವೆಬ್‌ಸೈಟ್‌ನಲ್ಲಿ ಇರುವ ಕೆಲಸದ ಜಾಹೀರಾತುಗಳನ್ನು ಮಾತ್ರ ಗಮನಿಸಿ.’
– ಹೀಗೆಂದು ಆದಾಯ ತೆರಿಗೆ ಇಲಾಖೆ ಮಂಗಳವಾರ ಸಾರ್ವಜನಿಕರಿಗೆ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಮಾಹಿತಿ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಆದಾಯ ಇಲಾಖೆ, “ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಕೊಡಿಸುವ ಜಾಹೀರಾತುಗಳ ಮೇಲೆ ನಿಗಾ ಇಡಿ.
ನಕಲಿ ನೇಮಕ ಪತ್ರಗಳನ್ನು ಕೊಟ್ಟು ಮೋಸ ಮಾಡುವವರ ಬಗ್ಗೆ ಎಚ್ಚರಿಕೆಯಿಂದ ಇರಿ. ಈ ಮೂಲಕ ದಾರಿ ತಪ್ಪಿಸಿ, ಮೋಸ ಮಾಡುವವರ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು’ ಎಂದು ಬರೆದುಕೊಂಡಿದೆ.
ಇದನ್ನೂ ಓದಿ:ಮೈದಾನದಲ್ಲೇ ಕುಸಿದು ಬಿದ್ದು ವ್ಯಕ್ತಿ ಸಾವು : ಕ್ರಿಕೆಟ್ ಆಡುತ್ತಿದ್ದಾಗ ನಡೆದ ದುರ್ಘಟನೆ
ದೇಶದ ಹಲವು ಭಾಗಗಳಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ ನೀಡುವ ಆಮಿಷ ಒಡ್ಡುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಟ್ವೀಟ್ ಮಾಡಲಾಗಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ ಅಥವಾ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ತೆರವಾದ ಹುದ್ದೆಗಳಿಗೆ ನೇಮಕ ಮಾಡುವ ಬಗ್ಗೆ ಪ್ರಕಟಣೆ ನೀಡಲಾಗುತ್ತದೆ. ಅದನ್ನು ಗಮನಿಸಿ ಎಂದು ಉದ್ಯೋಗಾಕಾಂಕ್ಷಿಗಳಿಗೆ ಇಲಾಖೆ ಮನವಿ ಮಾಡಿದೆ.