Advertisement

ಮೊಬೈಲ್‌ನಲ್ಲೇ ಸಿಗಲಿದೆ ಕಂದಾಯ ದಾಖಲೆ ಪತ್ರ: ಸಚಿವ ಆರ್‌. ಅಶೋಕ್‌ ಭರವಸೆ

12:04 AM Feb 05, 2023 | Team Udayavani |

ಚಿಕ್ಕಮಗಳೂರು: ರೈತರಿಗೆ ಅನುಕೂಲವಾಗುವಂತೆ ಕಂದಾಯ ಇಲಾಖೆಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಸರಳೀಕರಣ ಮಾಡಿ ರೈತರು ಮೊಬೈಲ್‌ನಲ್ಲೇ ಪಡೆದುಕೊಳ್ಳುವಂತಹ ವ್ಯವಸ್ಥೆಯನ್ನು ಶೀಘ್ರವೇ ಜಾರಿಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

Advertisement

ನಗರದಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮಲೆಕ್ಕಾಧಿಕಾರಿ ಪದನಾಮವನ್ನು ಬದಲಾಯಿಸಿ ಗ್ರಾಮ ಆಡಳಿತಾಧಿ ಕಾರಿ ಎಂದು ಮಾಡಲಾಗಿದೆ. ಪ್ರತಿ ಗ್ರಾಮ ಆಡಳಿತಾಧಿಕಾರಿಗೆ ಟ್ಯಾಬ್‌ ನೀಡಲಾಗುತ್ತಿದ್ದು. ಆ ಮೂಲಕ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿ ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ಸಾರ್ವಜನಿಕರಿಂದ ಪಡೆದ ಅರ್ಜಿಗಳನ್ನು ಟ್ಯಾಬ್‌ ಮೂಲಕ ನೇರವಾಗಿ ಸಂಬಂಧಪಟ್ಟ ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗಳಿಗೆ ಗ್ರಾಮ ಆಡಳಿತಾಧಿಕಾರಿ ಸಲ್ಲಿಸುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ಜನರ ಸಮಯ ಹರಣ ತಡೆಗಟ್ಟುವುದರ ಜೊತೆಗೆ ಸಕಾಲದಲ್ಲಿ ಜನರ ಕೆಲಸ ಕಾರ್ಯಗಳು ಆಗಲಿವೆ. ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ ಎಂದರು.

ಕಂದಾಯ ಇಲಾಖೆ ದಾಖಲೆ ಪತ್ರಗಳನ್ನು ಕಂಪ್ಯೂಟರೀಕರಣ ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ಆರು ತಾಲೂಕುಗಳಲ್ಲಿ ದಾಖಲೆ ಪತ್ರಗಳನ್ನು ಕಂಪ್ಯೂಟರೀಕರಣ ಮಾಡಲಾಗಿದೆ. ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದ ಅವರು, ಕೇಂದ್ರ ಸರ್ಕಾರ ರೈತರ ಜಮೀನು, ಮನೆಗಳನ್ನು ಡ್ರೋಣ್‌ ಮೂಲಕ ಸರ್ವೇ ಮಾಡುತ್ತಿದೆ. ರಾಜ್ಯ ಸರ್ಕಾರ ಇದಕ್ಕೆ 280 ಕೋಟಿ ರೂ. ನೀಡುತ್ತಿದ್ದು, ಇದರಿಂದ ರೈತರ ಜಮೀನು, ಮನೆ ಸರ್ವೇ ಮಾಡಿ ಸೂಕ್ತ ದಾಖಲೆಗಳನ್ನು ನೀಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ಮಧ್ಯೆ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಅಶೋಕ್‌, ಈ ಹಿಂದೆ ಸಚಿವರು ಪ್ರವಾಸಿ ಮಂದಿರಗಳಲ್ಲಿ ಕಾಫಿ ಕುಡಿದು ಅರ್ಜಿಗಳನ್ನು ಪಡೆದುಕೊಂಡು ಹೋಗುತ್ತಿದ್ದರು. ನಾನು ಕಾಫಿ ಕುಡಿಯುವುದರ ಜೊತೆಗೆ ಜನರ ನೋವುಗಳಿಗೆ ಸ್ಪಂದಿ ಸುತ್ತಿದ್ದೇನೆ. ಜಿಲ್ಲೆಯಲ್ಲಿ ನಡೆಸುತ್ತಿರುವ ಗ್ರಾಮವಾಸ್ತವ್ಯದ ಉದ್ದೇಶವೇ ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸುವುದಾಗಿದೆ ಎಂದರು.

Advertisement

ಯಾರ್ಯಾರು ಫಾರಂ ನಂ. 57 ಅರ್ಜಿಯಲ್ಲಿ ರೈತರಿಗೆ ಮೋಸ ಮಾಡಿದ್ದಾರೆ ಎಂಬ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಿದರೆ ಜೈಲಿಗೆ ಹಾಕುತ್ತೇವೆ ಎಂದು  ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next