Advertisement
ಕಾಂಗ್ರೆಸ್‌ನ ಹತ್ತಕ್ಕೂ ಹೆಚ್ಚು ಶಾಸಕರು ಮುಂಬೈಗೆ ತೆರಳಿದ್ದಾರೆ. ಎಂ.ಟಿ.ಬಿ.ನಾಗರಾಜ್, ಸುಧಾಕರ್, ನಾಗೇಶ್ ಚೆನ್ನೈಗೆ ಹೋಗಿ ಅಲ್ಲಿಂದ ಮುಂಬೈಗೆ ಶಿಫ್ಟ್ ಆಗಲಿದ್ದಾರೆ. ಮತ್ತಷ್ಟು ಶಾಸಕರು ಅತೃಪ್ತರ ಪಡೆ ಸೇರ್ಪಡೆಯಾಗಲಿದ್ದಾರೆ. ಆನಂದ್‌ಸಿಂಗ್ ಮುಂಬೈನಲ್ಲಿದ್ದಾರೆ ಎಂಬೆಲ್ಲಾ ಮಾತುಗಳು ಹೇಳಿಬಂದವು.
Related Articles
Advertisement
ಇದಾದ ನಂತರ ನಾಗೇಂದ್ರ ಸುದ್ದಿಗಾರರ ಜತೆ ಮಾತನಾಡಿ ನಾನು ಎಲ್ಲೂ ಹೋಗಿಲ್ಲ. ಬಳ್ಳಾರಿಯಲ್ಲೇ ಇದ್ದೇನೆ. ಜಿಲ್ಲೆಯ ಶಾಸಕರೆಲ್ಲಾ ಒಟ್ಟಾಗಿದ್ದೇವೆ. ಉಳಿದ ಶಾಸಕರು ಎಲ್ಲಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಕೆಲ ಹೊತ್ತಿನಲ್ಲೇ ಖಾಸಗಿ ಕಾರಿನಲ್ಲಿ ಸಿದ್ದರಾಮಯ್ಯ ನಿವಾಸಕ್ಕೆ ಶಾಸಕರಾದ ಗಣೇಶ್ ಹಾಗೂ ಪ್ರಸಾದ್ ಅಬ್ಬಯ್ಯ ಅವರೊಂದಿಗೆ ಆಗಮಿಸಿ ಇವರ್ಯಾರೂ ಎಲ್ಲೂ ಹೋಗಿಲ್ಲ ಎಂದು ಹೇಳಿ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಈ ಮಧ್ಯೆ, ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷೇತರ ಶಾಸಕ ನಾಗೇಶ್ ನನ್ನ ಸಂಪರ್ಕದಲ್ಲಿದ್ದಾರೆ. ಅವರ ಜತೆ ಇರುವ ಮೂವರಿಗೂ ನಾನೇ ಮುಂಬೈಗೆ ಹೋಗುವಂತೆ ಹೇಳಿದ್ದೇನೆ ಎಂದು ತಿಳಿಸಿದರು. ಹೀಗಾಗಿ, ಯಾವುದು ಸತ್ಯ, ಯಾವುದು ಸುಳ್ಳು ಎಂಬುದೇ ಅರ್ಥವಾಗದಂತಾಯಿತು.
ಗೌಪ್ಯಬಿಜೆಪಿ ಮೂಲಗಳ ಪ್ರಕಾರ 18 ಶಾಸಕರನ್ನು ಮಹಾರಾಷ್ಟ್ರದ ಸಚಿವರ ಮೂಲಕ ರಕ್ಷಣೆ ನೀಡಿ, ಮಂಗಳವಾರ ಎಲ್ಲರನ್ನೂ ಏಕಕಾಲಕ್ಕೆ ಬೆಂಗಳೂರಿಗೆ ಕರೆದುಕೊಂಡು ಬಂದು ರಾಜೀನಾಮೆ ಕೊಡಿಸುವ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮುಂಬೈಗೆ ತೆರಳಿದ್ದಾರೆ ಎನ್ನುವ ಶಾಸಕರು ಎಷ್ಟು ಜನ ಇದ್ದಾರೆ ಎನ್ನುವ ಅಧಿಕೃತ ಮಾಹಿತಿ ಮಾತ್ರ ಗೌಪ್ಯವಾಗಿಡಲಾಗಿದೆ. ಆಪರೇಷನ್ ಕಮಲಕ್ಕೆ ಒಪ್ಪಿಕೊಂಡಿರುವ 18 ಶಾಸಕರ ಪೈಕಿ 10 ಜನರಿಗೆ ಮಂತ್ರಿ ಸ್ಥಾನ ನೀಡಿ ಉಳಿದವರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ಭರವಸೆ ನೀಡಲಾಗಿದೆ ಎಂದು ಹೇಳಲಾಗಿದೆ. ಸಚಿವ ಸ್ಥಾನಕ್ಕಾಗಿ ಒತ್ತಡ ತಂತ್ರ?
ಮತ್ತೂಂದು ಮೂಲಗಳ ಪ್ರಕಾರ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ವಿಸ್ತರಣೆಗೆ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ಮುನಿಸಿಕೊಂಡಿರುವ ಸಚಿವಾಕಾಂಕ್ಷಿ ಶಾಸಕರು ನಾಯಕರ ವಿರುದ್ಧ ಸಿಡಿದೆದ್ದು ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ . ಅದಕ್ಕೆ ಬಿಜೆಪಿಯ ಆಪರೇಷನ್ ಕಮಲದ ಕರೆಗಳನ್ನೂ ನಾಯಕರ ಗಮನಕ್ಕೆ ತಂದು ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುವಂತೆ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪರಿಷತ್ ಚುನಾವಣೆ ಮುಗಿದರೆ ಪಿತೃ ಪಕ್ಷದ ನೆಪ ಹೇಳಿ ಮತ್ತೆ ಸಂಪುಟ ವಿಸ್ತರಣೆ ಮಾಡದೇ ಹಾಗೆಯೇ ಮುಂದೂಡುತ್ತಾರೆ ಎನ್ನುವ ಕಾರಣಕ್ಕೆ ಈಗಲೇ ಸಚಿವಾಕಾಂಕ್ಷಿ ಶಾಸಕರು ನಾಯಕರ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ವಿಧಾನ ಪರಿಷತ್ತಿನ ಖಾಲಿ ಇರುವ ಮೂರು ಸ್ಥಾನಗಳಿಗೆ ಅಕ್ಟೋಬರ್ 4 ರಂದು ಚುನಾವಣೆ ನಡೆಯಲಿದ್ದು, ಅದಕ್ಕೆ ಮುಂಚೆ ಸಂಪುಟ ವಿಸ್ತರಣೆಯಾದರೆ ಅಡ್ಡ ಮತದಾನ ಆಗುವ ಆತಂಕ ಕಾಂಗ್ರೆಸ್ ನಾಯಕರದು ಎಂದು ಹೇಳಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ತಕ್ಷಣಕ್ಕೆ ಸಂಪುಟ ವಿಸ್ತರಣೆ ಲಕ್ಷಣಗಳೂ ಇಲ್ಲ ಎಂದು ಹೇಳಲಾಗಿದೆ.