ವಾಡಿ (ಚಿತ್ತಾಪುರ): ರಸ್ತೆಯಲ್ಲಿ ಗುಂಪುಕಟ್ಟಿ ನಿಂತು ವಾಹನಗಳನ್ನು ತಡೆಯುವ ಮೂಲಕ ದೇಣಿಗೆ ನೀಡುವಂತೆ ಒತ್ತಾಯಿಸುತ್ತಿದ್ದ ಗಣೇಶ ಭಕ್ತರು ಪೊಲೀಸರ ಅತಿಥಿಯಾದ ಘಟನೆ ರವಿವಾರ ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿ ಆಚರಣೆಗೆ ಸಂಬಂಧಿಸಿದಂತೆ ಸರಕಾರ ಈಗಾಗಲೇ ಹಲವು ನಿಬಂಧನೆಗಳನ್ನು ವಿಧಿಸಿ ಕಾನೂನು ಜಾರಿಗೆ ತಂದಿದೆ. ಹೊಸ ಮಾರ್ಗಸೂಚಿಗಳನ್ನು ಧಿಕ್ಕರಿಸಿ ಯುವಕರ ದಂಡೊಂದು ಕಳೆದ ಐದಾರು ದಿನಗಳಿಂದ ರಾವೂರ ಮತ್ತು ಲಕ್ಷ್ಮೀಪುರವಾಡಿ ಗ್ರಾಮಗಳ ನಡುರಸ್ತೆಯಲ್ಲಿ ಜಮಾಯಿಸುವ ಮೂಲಕ ವಾಹನಗಳನ್ನು ತಡೆದು ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ದೇಣಿಗೆ ನೀಡುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ವಾಡಿ ಠಾಣೆಯ ಪಿಎಸ್‌ಐ ವಿಜಯಕುಮಾರ ಭಾವಗಿ, ಗಣೇಶ ಮಂಡಳಿಯ ಒಟ್ಟು ಏಳು ಜನ ಭಕ್ತ ಪದಾಧಿಕಾರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಕಾನೂನು ಪಾಠ ಕಲಿಸಿದ್ದಾರೆ.
ಇದನ್ನೂ ಓದಿ:ಕಿಷ್ಕಿಂದಾ ಅಂಜನಾದ್ರಿ ಬೆಟ್ಟದಲ್ಲಿ ಶ್ರೀ ಆಂಜನೇಯನ ದರ್ಶನ ಸಿಗದೆ ಹಿಂತಿರುಗಿದ ನಟ ಪುನೀತ್
ಚಂದಾ ವಸೂಲಿ ಹೆಸರಿನಲ್ಲಿ ಸಾರ್ವಜನಿಕರ ವಾಹನಗಳನ್ನು ತಡೆದು ಒತ್ತಾಯದಿಂದ ಹಣಕ್ಕೆ ಬೇಡಿಕೆಯಿಡುವುದು ಅಪರಾಧವಾಗಿದೆ. ಗಣೇಶೋತ್ಸವ ಅದ್ಧೂರಿಯಾಗಿ ಆಚರಿಸಲು ಅವಕಾಶವಿಲ್ಲ. ನಾಲ್ಕು ಅಡಿಗಿಂತ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರಕಾರದ ಹೊಸ ಮಾರ್ಗಸೂಚಿಯಲ್ಲಿ ಅನುಮತಿ ನಿರಾಕರಿಸಲಾಗಿದೆ. ಎಲ್ಲೆಂದರಲ್ಲಿ ಮೂರ್ತಿ ಸ್ಥಾಪನೆ ಮಾಡುವಂತಿಲ್ಲ. ಒಂದು ವಾರ್ಡ್ಗೆ ಒಂದು ಗಣೇಶ ಮೂರ್ತಿ ಸ್ಥಾಪನೆಗೆ ಮಾತ್ರ ಅವಕಾಶವಿದೆ. ಮನೆಗಳಲ್ಲಿ ಸರಳವಾಗಿ ಗಣೇಶ ಚತುರ್ತಿ ಆಚರಿಸಬಹುದಾಗಿದೆ.
ಶಾಂತಿಯುತವಾಗಿ ಮತ್ತು ಗೌರಯುತವಾಗಿ ಹಬ್ಬ ಆಚರಿಸಬೇಕು. ಸರಳವಾಗಿ ಶಾಂತಿಯುತವಾಗಿ ಗಣೇಶನ ಆರಾಧನೆ ಮಾಡುವವರಿಗೆ ಪೊಲೀಸ್ ಇಲಾಖೆ ಸಹಕಾರ ನೀಡುತ್ತದೆ. ಗಣೇಶ ಹಬ್ಬದ ಹೆಸರಿನಲ್ಲಿ ಒತ್ತಾಯದಿಂದ ಚಂದಾ ವಸೂಲಿಗೆ ಮುಂದಾಗುವುದು ಮತ್ತು ರಸ್ತೆಗಳಲ್ಲಿ ಅಡ್ಡಗಟ್ಟಿ ವಾಹನಗಳನ್ನು ತಡೆದು ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡಿದರೆ ಅಂಥಹ ಗಣೇಶ ಮಂಡಳಿ ಪದಾಧಿಕಾರಿಗಳ ವಿರುದ್ಧ ಮೂಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್‌ಐ ವಿಜಯಕುಮಾರ ಭಾವಗಿ ಎಚ್ಚರಿಸಿದ್ದಾರೆ.