ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆ ಕೀಟನಾಶಕ, ಬೀಜ ಮತ್ತು ರಸಗೊಬ್ಬರ ಮಾರಾಟ ಅಂಗಡಿಗಳ ಮೇಲೆ ವಿಜಯಪುರ ಕೃಷಿ ಜಾಗೃತ ದಳದ ಅಧಿಕಾರಿಗಳ ತಂಡ ಹಾಗೂ ಸಿಂದಗಿ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಅಧಿಕಾರಿಗಳ ತಂಡ ಪ್ರತ್ಯೇಕವಾಗಿ ದಾಳಿ ಮಾಡಿ ನಿಯಮ ಉಲ್ಲಂಘಿಸಿದ ಪ್ರಕರಣಗಳನ್ನು ಪತ್ತೆ ಹಚ್ಚಿದೆ.
ಈ ಕುರಿತಾಗಿ ಒಟ್ಟು 25 ಅಂಗಡಿಗಳನ್ನು ಪರಿಶೀಲನೆ ಮಾಡಿದ್ದು ಅವುಗಳಲ್ಲಿ 8 ಅಂಗಡಿಗಳ ಮಾಲಿಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಕೃಷಿ ಇಲಾಖೆಯ ಓ ಪಾರ್ಮ ಅನುಮತಿ ಪಡೆಯದೆ ತಾಲೂಕಿನ ಕನ್ನೊಳ್ಳಿ ಗ್ರಾಮದ ಅಂಗಡಿಯಲ್ಲಿ 17:17:17 ಗ್ರಾನಿವಿಲೆಟೆಡ್ ಮಿಕ್ಸರ್ ರಸಗೊಬ್ಬರ ಮಾರಾಟ ಮಾಡುತ್ತಿರುವುದನ್ನು ಖಚಿತ ಪಡೆಸಿಕೊಂಡು ಅಂಗಡಿಯ ಗೋದಾಮಿನ ಮೇಲೆ ದಾಳಿ ಮಾಡಿ ಅಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಅಂದಾಜು 45 ಸಾವಿರ ರೂ. ಮೌಲ್ಯದ 50 ಕೆಜಿ ತೂಕವಿರುವ ಒಟ್ಟು 43 ಬ್ಯಾಗ್ ಗಳನ್ನು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ:ಜೀವನ್ಮರಣ ಹೋರಾಟದಲ್ಲಿದ್ದ ಗೋವನ್ನು ರಕ್ಷಿಸಿದ ಗೋ ರಕ್ಷಕರು
ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ವಾಯ್. ಸಿಂಗೆಗೋಳ ಮಾತನಾಡಿ, ಮುಂಗಾರು ಹಂಗಾಮಿಗಾಗಿ ರೈತರಿಗೆ ಗುಣಮಟ್ಟದ ಕೀಟನಾಶಕ, ಬೀಜ, ರಸಗೊಬ್ಬರ ದೊರೆಯಬೇಕು ಎನ್ನುವುದು ಸರ್ಕಾರ ಮತ್ತು ಕೃಷಿ ಇಲಾಖೆಯ ಉದ್ದೇಶವಾಗಿದೆ. ಆದರೆ ಈ ಉದ್ದೇಶದ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೆಲ ಅಂಗಡಿಯವರು ನಕಲಿ ಉತ್ಪನ್ನಗಳನ್ನು ಉತ್ತಮ ಗುಣಮಟ್ಟದ ಉತ್ಪನ್ನಗಳು ಎಂದು ನಂಬಿಸಿ ರೈತರಿಗೆ ಮೋಸ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದರಿಂದ ತಪಾಸಣೆಗೆ ಮುಂದಾಗಬೇಕಾಯಿತು ಎಂದು ತಿಳಿಸಿದರು.
ಸಿಂದಗಿ ಕೃಷಿ ಕೇಂದ್ರದ ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ ಮಾತನಾಡಿ, ನಿಷೇಧಿತ ಕೀಟನಾಶಕ, ಬೀಜ, ರಸಗೊಬ್ಬರ ಮಾರಾಟ ನಿಯಂತ್ರಣಕ್ಕಾಗಿ ಕೃಷಿ ಇಲಾಖೆ ವಿಶೇಷ ಕಾನೂನು ರೂಪಿಸಿದೆ. ತಾಲೂಕಲ್ಲಿ ಒಟ್ಟು 25 ಕಡೆ ಈ ದಾಳಿ ನಡೆಸಿದ್ದು ಸಂಶಯ ಬಂದ 8 ಅಂಗಡಿಗಳ ಮಾಲಿಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಸ್ಟಾಕ್ ಮತ್ತು ಮಾರಾಟದ ಅಂಕಿಸಂಖ್ಯೆ ಪಡೆದುಕೊಂಡಿದೆ. ತಪ್ಪು ಮಾಡಿದ್ದು ಸಾಬೀತಾದಲ್ಲಿ ನಿಯಮದ ಪ್ರಕಾರ ಕ್ರಮ ಕೈಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ತಂಡದಲ್ಲಿ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ಜಾಗೃತ ದಳದ ಸಹಾಯಕ ಕೃಷಿ ನಿರ್ದೇಶಕ ಎ.ಪಿ. ಬಿರಾದಾರ, ಸಹಾಯಕ ಕೃಷಿ ನಿದೇಶಕಿ ರೇಷ್ಮಾ ಸುತಾರ, ಕೃಷಿ ಇಲಾಖೆಯ ರಸಗೊಬ್ಬರ, ಕೀಟನಾಶಕ, ಬೀಜ ಗುಣಮಟ್ಟ ಪರಿಣಿತರು ಇದ್ದರು.