ಪುತ್ತೂರು: ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಲಿರುವ ಸ್ವಾತಂತ್ರ್ಯ ರಥಕ್ಕೆ ಕಬಕ ಗ್ರಾಮ ಪಂಚಾಯತ್ ವಠಾರದಲ್ಲಿ ಎಸ್ ಡಿ.ಪಿ.ಐ ಕಾರ್ಯರ್ತರು ತಡೆ ಒಡ್ಡಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು, ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಪಡಿಸಿದವರ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಗ್ರಾಮ ಪಂಚಾಯತ್ ರಥಕ್ಕೆ ಕಬಕ ಗ್ರಾಮ ಪಂಚಾಯತ್ ವಠಾರದಲ್ಲಿ ಗ್ರಾ.ಪಂ. ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ ಅವರು ಚಾಲನೆ ನೀಡಿ ಜೈಕಾರ ಹಾಕುತ್ತಿದ್ದಂತೆಯೇ ಎಸ್.ಡಿ.ಪಿ.ಐ. ಕಾರ್ಯಕರ್ತರು ಧಿಕ್ಕಾರ ಕೂಗಿ ಸ್ವಾತಂತ್ರ್ಯ ರಥಕ್ಕೆ ತಡೆ ಒಡ್ಡಿದ್ದರು. ಈ ವೇಳೆ ಪರಸ್ಪರ ವಾಗ್ವಾದ ನಡೆದಿದ್ದು, ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಒ ಆಶಾರವರು ಸಮಾಧಾನ ಮಾಡಿದ್ದರು. ಈ ವೇಳೆ ಉದ್ರಿಕ್ತರ ತಂಡ ವೀರ ಸಾವರ್ಕರ್ ಫೋಟೊ ತೆಗೆದು ಟಿಪ್ಪು ಸುಲ್ತಾನ್ ಫೋಟೊ ಅಳವಡಿಸುವಂತೆ ಪಟ್ಟು ಹಿಡಿದಿದ್ದರು.
ಇದನ್ನೂ ಓದಿ:ಜಗದ್ವಂದ್ಯ ರಾಷ್ಟ್ರವಾಗುವತ್ತ ಮುನ್ನಡೆದ ಭಾರತ : ನಳಿನ್‍ಕುಮಾರ್ ಕಟೀಲ್
ಈ ಬಗ್ಗೆ ಮಾಹಿತಿ ಅರಿತ ಪುತ್ತೂರು ನಗರ ಠಾಣಾ ಇನ್ಸ್ ಪೆಕ್ಟರ್ ಗೋಪಾಲ ನಾಯ್ಕ್ ರವರ ನೇತೃತ್ವದ ಪೊಲೀಸರ ತಂಡ ಆಗಮಿಸಿ ಪ್ರತಿಭಟನಾಕಾರರನ್ನು ಚದುರಿಸಿದ್ದರು. ಇದೀಗ ಶಾಸಕ ಸಂಜೀವ ಮಠಂದೂರು ಗ್ರಾಮ ಪಂಚಾಯತ್ ಕಛೇರಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಸ್ವಾತಂತ್ರ್ಯ ಆಚರಣೆಗೆ ಅಡ್ಡಿ ಪಡಿಸಿದವರನ್ನು ಗುರುತಿಸಿ ಪೊಲೀಸ್ ಇಲಾಖೆಗೆ ದೂರು ನೀಡಲು ಕ್ರಮ ಕೈಗೊಳ್ಳುವಂತೆ ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿಯವರಿಗೆ ಸೂಚಿಸಿದರು. ಅಲ್ಲದೆ, ದೇಶದ್ರೋಹ ಕಾಯ್ದೆಯಡಿ ಕ್ರಮ ಕೈಗೊಳ್ಳಿ ಎಂದು ವೃತ್ತ ನಿರೀಕ್ಷಕ ಗೋಪಾಲ ನಾಯ್ಕರವರಿಗೆ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಗೆ ಅಡ್ಡಿ ಪಡಿಸಿರುವ ವಿಚಾರ ಪ್ರಚಾರ ಆಗುತ್ತಿದ್ದಂತೆಯೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ.