ಹುಣಸೂರು: ತನ್ನ ಪತ್ನಿಯ ಶೀಲ ಶಂಕಿಸಿದ ಪತಿಯೇ ಕತ್ತುಕೊಯ್ದು ಕೊಲೆ ಮಾಡಿರುವ ಘಟನೆ ತಾಲೂಕಿನ ಗಾವಡಗೆರೆ ಹೋಬಳಿಯ ಬೋರೇಗೌಡನಕೊಪ್ಪಲಿನಲ್ಲಿ ಗುರುವಾರ ರಾತ್ರಿ ನಡೆದಿದೆ.
ಬೋರೇಗೌಡನಕೊಪ್ಪಲಿನ ಲವಕುಮಾರ್ ಎಂಬಾತನೇ ಪತ್ನಿ ಪಂಕಜ(32)ರನ್ನು ಕೊಲೆ ಮಾಡಿರುವ ಆರೋಪಿ, ಇದೀಗ ನಾಪತ್ತೆಯಾಗಿದ್ದಾನೆ. 10 ವರ್ಷದ ಹೆಣ್ಣು ಮಗಳಿದ್ದಾಳೆ.
14 ವರ್ಷಗಳ ಹಿಂದೆ ಕೆ.ಆರ್.ನಗರ ತಾಲೂಕಿನ ನಾರಾಯಣಪುರದ ಸಂಬಂಧಿಕರಾದ ಪಂಕಜರನ್ನು ಮದುವೆ ಮಾಡಿಕೊಡಲಾಗಿತ್ತು, ಅಂದಿನಿಂದಲೂ ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಆಗಾಗ್ಗೆ ದಂಪತಿಗಳ ನಡುವೆ ಗಲಾಟೆ ನಡೆಯುತ್ತಿತ್ತು, ಈ ಸಂಬಂಧ ಮಹಿಳಾ ಠಾಣೆಗೆ ದೂರು ನೀಡಿದ್ದರು, ರಾಜಿ ಪಂಚಾಯ್ತಿಯೂ ನಡೆದಿತ್ತು.
ಇದನ್ನೂ ಓದಿ:ವಿಮಾನ ಚಲಿಸುತ್ತಿರುವಾಗಲೇ ಪೈಲಟ್‌ಗೆ ಹೃದಯಾಘಾತ; ನಾಗ್ಪುರದಲ್ಲಿ ವಿಮಾನ ತುರ್ತು ಭೂಸ್ಪರ್ಶ
ಬುಧವಾರದಂದು ಆರೋಪಿ ಲವಕುಮಾರನ ತಂದೆ ಕೃಷ್ಣೇಗೌಡ ಮೃತರಾಗಿದ್ದರು. ಮಾರನೇ ದಿನ ಮನೆಯಲ್ಲಿ ಮಲಗಿದ್ದ ವೇಳೆ ಪಂಕಜರ ಕತ್ತನ್ನು ಕೊಯ್ದು ಕೊಲೆ ಮಾಡಿದ್ದು, ಮೃತಳ ಸಂಬಂಧಿ ಶೃತಿ ಬಿಳಿಕೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಡಿಷನಲ್ ಎಸ್.ಪಿ.ಆರ್.ಶಿವಕುಮಾರ್,ಡಿವೈಎಸ್‌ಪಿ ರವಿಪ್ರಸಾದ್, ಇನ್ಸ್‌ಪೆಕ್ಟರ್ ರವಿಕುಮಾರ್ ಭೇಟಿ ಇತ್ತು ಪರಿಶೀಲಿಸಿದರು.