ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತರ ನಡುವೆ ಹೆಡ್‌ಫೋನ್ ವಿಚಾರಕ್ಕೆ ನಡೆದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಮಿಳುನಾಡು ಮೂಲದ ಕಾರ್ತಿಕ್(27) ಕೊಲೆಯಾದವ.
ಈ ಸಂಬಂಧ ರಜನೀಶ್ ಮತ್ತು ರವಿ ಎಂಬುವರನ್ನು ಬಂಧಿಸಲಾಗಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯವರಾದ ಕಾರ್ತಿಕ್, ರಜನೀಶ್ ಮತ್ತು ರವಿ ದೊಡ್ಡನಾಗಮಂಗಲದ ಬಾಲಾಜಿ ಲೇಔಟ್‌ನಲ್ಲಿ ನಿರ್ಮಾಣ ಹಂತದ ಮನೆಯಲ್ಲಿ ಪೇಟಿಂಗ್ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ವಾಸವಾಗಿದ್ದರು. ಡಿ.31ರಂದು ಆರೋಪಿ ರಜನೀಶ್ ಹುಟ್ಟುಹಬ್ಬ ಹಾಗೂ ಹೊಸವರ್ಷದ ಸಂಭ್ರಮಾಚರಣೆಗಾಗಿ ನಿರ್ಮಾಣ ಹಂತದ ಕಟ್ಟಡದಲ್ಲೇ ಕಾರ್ತಿಕ್, ರವಿ ಹಾಗೂ ಇತರರು ಪಾರ್ಟಿ ಮಾಡಿದ್ದಾರೆ. ಈ ವೇಳೆ ಎಲ್ಲರೂ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಆಗ ರಜನೀಶ್‌ನ ಹೆಡ್‌ಫೋನ್ ಅನ್ನು ಕಾರ್ತಿಕ್ ತೆಗೆದುಕೊಂಡಿದ್ದಾನೆ. ಅದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ.
ಈ ವೇಳೆ ರಜನೀಶ್ ಸಹಾಯಕ್ಕೆ ಬಂದ ರವಿ ಹಾಗೂ ಇತರರು ಕಾರ್ತಿಕ್ ಮೇಲೆ ಹಲ್ಲೆ ನಡೆಸಿದ್ದಾನೆ. ಕೈ ಮತ್ತು ಕಾಲುಗಳಲ್ಲೇ ಕಾರ್ತಿಕ್ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದರು. ಜತೆಗೆ ಗಾಜಿನಿಂದಲೂ ಹಲ್ಲೆ ನಡೆಸಿದ್ದಾರೆ. ಅನಂತರ ಎಲ್ಲರೂ ಮಲಗಲು ಹೋಗಿದ್ದಾರೆ. ಮರು ದಿನ ಬೆಳಗ್ಗೆ ಕಾರ್ತಿಕ್ ಎಚ್ಚರಗೊಂಡಿಲ್ಲ. ಬಳಿಕ ಇತರೆ ಕಾರ್ಮಿಕರು ಕಾರ್ತಿಕ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.