ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಎರಡು ವಿದ್ಯಾರ್ಥಿಗಳ ಗುಂಪಿನ ನಡುವೆ ನಡೆದ ಜಗಳದಲ್ಲಿ ಒಬ್ಬ ಮೆಕಾನಿಕಲ್ ಎಂಜಿನಿಯರ್ ವಿದ್ಯಾರ್ಥಿ ಹತ್ಯೆಯಾಗಿರುವ ಘಟನೆ ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಭಾಸ್ಕರ್ ಜೆಟ್ಟಿ (22) ಕೊಲೆಯಾದ ಯುವಕ.
ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಭಾಸ್ಕರ್ ಜೆಟ್ಟಿ ಗುಜರಾತ್ ಮೂಲದವರಾಗಿದ್ದು, ಮತ್ತಿಕೆರೆಯಲ್ಲಿ ವಾಸವಾಗಿದ್ದ. ಠಾಣೆ ವ್ಯಾಪ್ತಿಯಲ್ಲಿರುವ ಪ್ರತಿಷ್ಠಿತ ಕಾಲೇಜಿನಲ್ಲಿ 8ನೇ ಸೆಮಿಸ್ಟರ್‌ನ ಮೆಕಾನಿಕಲ್ ಎಂಜಿನಿಯರ್ ವಿದ್ಯಾರ್ಥಿಯಾಗಿದ್ದ. ಶುಕ್ರವಾರ ಸಂಜೆ ಕಾಲೇಜು ಆವರಣದಲ್ಲಿ ಕಾಲೇಜು ಫೆಸ್ಟ್ ನಡೆಯುತ್ತಿತ್ತು. ಭಾಸ್ಕರ್ ಜೆಟ್ಟಿ ಸ್ನೇಹಿತ ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದ. ಆಗ ಮತ್ತೂಂದು ಗುಂಪಿನ ಯುವಕ ಮಧ್ಯ ಪ್ರವೇಶಿಸಿದ್ದಾನೆ. ಅಲ್ಲದೆ, ಭಾಸ್ಕರ್ ಜೆಟ್ಟಿ ಸ್ನೇಹಿತ ಹಿಡಿದುಕೊಂಡಿದ್ದ ಧ್ವನಿವರ್ಧಕ(ಮೈಕ್) ಕಸಿದುಕೊಂಡಿದ್ದಾನೆ. ಈ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಜಗಳ ನಡೆಯುತ್ತಿತ್ತು. ಆಗ ಮಧ್ಯಪ್ರವೇಶಿಸಿದ ಭಾಸ್ಕರ್ ಜೆಟ್ಟಿ ಎದುರಾಳಿ ಗುಂಪಿನ ಯುವಕರ ಜತೆ ಹೊಡೆದಾಡಿಕೊಂಡಿದ್ದ. ಅದು ವಿಕೋಪಕ್ಕೆ ಹೋದಾಗ ಆರೋಪಿಗಳು ಚಾಕುವಿನಿಂದ ಭಾಸ್ಕರ್ ಜೆಟ್ಟಿ ಕೈ ಮತ್ತು ಎದೆ ಭಾಗಕ್ಕೆ ಇರಿದಿದ್ದಾರೆ.
ತೀವ್ರರಕ್ತಸ್ರಾವದಿಂದ ಕೆಳಗೆ ಬಿದ್ದ ಭಾಸ್ಕರ್ ಜೆಟ್ಟಿಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾನೆ. ಕೃತ್ಯ ಎಸಗಿದ ಆರೋಪಿಗಳು ಪರಾರಿಯಾಗಿದ್ದಾರೆ.
ಕಾಲೇಜಿನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಗಲಾಟೆ ದೃಶ್ಯ ಸೆರೆಯಾಗಿದ್ದು, ಆರೋಪಿಗಳ ಸುಳಿವು ಸಿಕ್ಕಿದೆ. ಸದ್ಯದಲ್ಲೇ ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದರು. ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.