ಥಾಣೆ: ಈ ವರ್ಷದ ಮೊದಲ ಎರಡು ತಿಂಗಳಲ್ಲಿ ಥಾಣೆ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಹತ್ಯೆ, ಅತ್ಯಾಚಾರ ಮತ್ತು ಅಪಹರಣ ಸಹಿತ ಅಪರಾಧಗಳ ಸಂಖ್ಯೆ ಹೆಚ್ಚಾಗಿದ್ದು, ಸುಮಾರು 1,500ಕ್ಕೂ ಹೆಚ್ಚು ಅಪರಾಧಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿಯಲ್ಲಿ 878 ಪ್ರಕರಣಗಳ ಪೈಕಿ 482 ಅಂದರೆ ಶೇ. 55ರಷ್ಟು ಪರಿಹರಿಸಲಾಗಿದ್ದರೆ, ಫೆಬ್ರವರಿಯಲ್ಲಿ 796 ಪ್ರಕರಣಗಳಲ್ಲಿ 462 ಅಂದರೆ ಶೇ. 58ರಷ್ಟು ಪರಿಹರಿಸುವಲ್ಲಿ ಥಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೆಚ್ಚುತ್ತಿರುವ ಅಪರಾಧವನ್ನು ನಿಗ್ರಹಿಸಲು ಥಾಣೆ ಪೊಲೀಸರು ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಪೊಲೀಸ್ ಇಲಾಖೆಯು ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಥಾಣೆ ಪೊಲೀಸರು ಅನೇಕ ಪ್ರಮುಖ ಅಪರಾಧಗಳನ್ನು ಭೇದಿಸಿದ್ದಾರೆ. ಆದರೆ 2021 ವರ್ಷ ಪ್ರಾರಂಭದಿಂದ ಅಪರಾಧಗಳು ಮತ್ತೆ ಹೆಚ್ಚುತ್ತಿವೆ. ಕಳೆದ ಎರಡು ತಿಂಗಳಲ್ಲಿ ಥಾಣೆ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಹಲವಾರು ಗಂಭೀರ ಪ್ರಕರಣಗಳು ನಡೆದಿವೆ. ಜನವರಿಯಲ್ಲಿ 8 ಮತ್ತು ಫೆಬ್ರವರಿಯಲ್ಲಿ 14 ಹತ್ಯೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 12 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಹತ್ಯೆ ಯತ್ನ ಪ್ರಕರಣಗಳ ಸಂಖ್ಯೆ 17ರಷ್ಟಿದ್ದು ಇದರಲ್ಲಿ 15 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಜನವರಿಯಲ್ಲಿ 25 ಅತ್ಯಾಚಾರ ಪ್ರಕರಣಗಳು, ಫೆಬ್ರವರಿಯಲ್ಲಿ 16 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಜನವರಿಯಲ್ಲಿ 22 ಪ್ರಕರಣ ಗಳನ್ನು ಮತ್ತು ಫೆಬ್ರವರಿಯಲ್ಲಿ 12 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಎರಡು ದರೋಡೆ ಪ್ರಕರಣಗಳು ದಾಖಲಾಗಿದ್ದು, ಎರಡೂ ಪ್ರಕರಣಗಳನ್ನು ಭೇದಿಸಲಾಗಿದೆ.
ಕಳ್ಳತನ ಪ್ರಕರಣಗಳು ಹೆಚ್ಚಳ :
ಕಳೆದ ಎರಡು ತಿಂಗಳಲ್ಲಿ ಕಳ್ಳತನಗಳ ಪ್ರಕರಣಗಳು ಹೆಚ್ಚಳಗೊಂಡಿವೆ. ಜನವರಿಯಲ್ಲಿ ಪಿಕ್‌ಪಾಕೆಟ್ 37 ಪ್ರಕರಣ, ಮನೆಗಳಿಗೆ ನುಗ್ಗಿ ಕಳ್ಳತನದ 51 ಪ್ರಕರಣ ಮತ್ತು ಇತರ ಕಳ್ಳತನದ 218 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ ಕ್ರಮವಾಗಿ 24, 17 ಮತ್ತು 48 ಪ್ರಕರಣಗಳನ್ನು ಮಾತ್ರ ಭೇದಿಸಲಾಗಿದೆ. ಫೆಬ್ರವರಿಯಲ್ಲಿ ಪಿಕ್‌ಪಾಕೆಟ್ 31 ಪ್ರಕರಣ, ಮನೆಗೆ ನುಗ್ಗಿ ಕಳ್ಳತನದ 60 ಪ್ರಕರಣ ಮತ್ತು ಇತರ ಕಳ್ಳತನದ 188 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಪೈಕಿ 13 ಪಿಕ್‌ಪಾಕೆಟ್, 23 ಮನೆಗೆ ನುಗ್ಗಿ ಕಳವು ಹಾಗೂ ಇತರ ಕಳ್ಳತನದ 48 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಎರಡು ತಿಂಗಳಲ್ಲಿ 115 ವಂಚನೆ ಪ್ರಕರಣಗಳು ದಾಖಲಾಗಿದ್ದು, 33 ಪ್ರಕರಣಗಳನ್ನು ಮಾತ್ರ ಪೊಲೀಸರು ಬಗೆಹರಿಸಿದ್ದಾರೆ. ಅಪಹರಣ ಪ್ರಕರಣಗಳ ಸಂಖ್ಯೆ ಕ್ರಮವಾಗಿ 80 ಮತ್ತು 60 ಆಗಿದ್ದು, ಈ ಪೈಕಿ 50 ಮತ್ತು 39 ಪ್ರಕರಣಗಳು ಪತ್ತೆಯಾಗಿವೆ. ಜನವರಿಯಲ್ಲಿ 51 ಕಿರುಕುಳ ಪ್ರಕರಣಗಳು ಮತ್ತು ಫೆಬ್ರವರಿಯಲ್ಲಿ 40 ಕಿರುಕುಳದ ಪ್ರಕರಣಗಳು ದಾಖಲಾಗಿವೆ. ಪೊಲೀಸರು ಕ್ರಮವಾಗಿ 39 ಮತ್ತು 36 ಪ್ರಕರಣಗಳನ್ನು ಬಗೆಹರಿಸಿ¨ªಾರೆ.