ಶಿರ್ವ: ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಕಟ್ಟಿಂಗೇರಿ ಗಣಪನಕಟ್ಟೆ ಬಳಿ ಕಾಡಿನಲ್ಲಿ ಮಾಂಸ ಮಾಡಲು ಕಟ್ಟಿ ಹಾಕಿದ್ದ ಗಂಡು ಕರುವನ್ನು ಶಿರ್ವ ಪೊಲೀಸರು ರಕ್ಷಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಗಣಪನಕಟ್ಟೆಯ ಬಶೀರ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಸ್ನೇಹಿತ ಮೊಹಮ್ಮದ್ ಹ್ಯಾರಿಸ್ ಎಂಬಾತನು ಬಶೀರ್‌ಗೆ ಕರೆ ಮಾಡಿ, ಎಲ್ಲಿಂದಲಾದರೂ ಜಾನುವಾರುಗಳನ್ನು ಕದ್ದು ತರುವಂತೆ ಹೇಳಿದ್ದ. ಕಟ್ಟಿಂಗೇರಿ ರಸ್ತೆ ಬದಿಯಲ್ಲಿ ಬೀಡಾಡಿ ದನಗಳಿರುವುದಾಗಿ ಬಶೀರ್ ತಿಳಿಸಿದಂತೆ ಮೊಹಮ್ಮದ್ ಹ್ಯಾರಿಸ್ ಹಾಗೂ ಮತ್ತೋರ್ವ ವ್ಯಕ್ತಿ ಜಾನುವಾರುಗಳನ್ನು ಕದ್ದು ಮಾಂಸ ಮಾರಿ ಬಂದ ಹಣವನ್ನು ಸಮಾನವಾಗಿ ಹಂಚಿಕೊಳ್ಳಲು ನಿರ್ಧರಿಸಿದ್ದರು.
ಮೇ 11ರಂದು ಬೊಬ್ಬರ್ಯ ಕೆರೆ ಬಳಿರಸ್ತೆ ಬದಿಯಲ್ಲಿದ್ದ ಗಂಡು ಕರುವನ್ನು ಕದ್ದು ತಂದು ಕಾಡಿನಲ್ಲಿ ಕಟ್ಟಿ ಹಾಕಲಾಗಿತ್ತು. ರಾತ್ರಿ ಮಾಂಸ ಮಾಡಲು ನಿರ್ಧರಿಸಿ ಮೊಹಮ್ಮದ್ ಹ್ಯಾರಿಸ್ ಹಾಗೂ ಮತ್ತೋರ್ವ ಸಲಕರಣೆ ತರಲು ತೆರಳಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಶಿರ್ವ ಠಾಣಾಧಿಕಾರಿ ರಾಘವೇಂದ್ರ ಸಿ. ಸ್ಥಳಕ್ಕೆ ತೆರಳಿ ಬಶೀರ್‌ನನ್ನು ವಶಕ್ಕೆ ಪಡೆದು, ಸುಮಾರು 5 ಸಾವಿರ ರೂ. ಮೌಲ್ಯದ ಗಂಡು ಕರುವನ್ನು ರಕ್ಷಿಸಿದ್ದಾರೆ.
ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.