ಸಾಗರ: ನಗರದ ಗುಲಾಮುದ್ದೀನ್ ರಸ್ತೆಯ ಎಂಟು ವರ್ಷದ ಬಾಲಕಿ ಒಬ್ಬಳು ಆಕಸ್ಮಿಕವಾಗಿ ನುಂಗಿದ್ದು ಎರಡು ರೂಪಾಯಿ ನಾಣ್ಯ, ಅದನ್ನು ಹೊರತೆಗೆಯಲು ಬಾಲಕಿಯ ಪೋಷಕರು ಬರೋಬ್ಬರಿ 21 ಸಾವಿರ ಖರ್ಚು ಮಾಡಿದ ವಿಲಕ್ಷಣ ಘಟನೆ ನಡೆದಿದೆ.
5 ದಿನದ ಹಿಂದೆ ಈ ಬಾಲಕಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನಾಣ್ಯವನ್ನು ಬಾಯಲ್ಲಿಟ್ಟುಕೊಂಡು ಹಾಗೆಯೇ ನುಂಗಿ ಬಿಟ್ಟಿದ್ದಳು. ತಕ್ಷಣವೇ ಬಾಲಕಿಯ ಪೋಷಕರು ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪರಿಶೀಲಿಸಿದ ಎಕ್ಸರೇ ತೆಗೆದು, ಒಂದೆರಡು ದಿನದಲ್ಲಿ ಮಲ ವಿಸರ್ಜನೆ ರೂಪದಲ್ಲಿ ಹೋಗಬಹುದು ಎಂದು ವೈದ್ಯರು ಹೇಳಿದಾಗ ಪೋಷಕರು ಆತಂಕದಲ್ಲೇ ಮನೆಗೆ ತಲುಪಿದರು.
ಇದನ್ನೂ ಓದಿ:‘ನಾನು ಏಕಾಂಗಿದ್ದೇನೆ…” ನೋವು ತೋಡಿಕೊಂಡ ಚಿನ್ನದ ಹುಡುಗ ನೀರಜ್ ಚೋಪ್ರಾ
ಆದರೆ 5 ದಿನ ಕಳೆದರೂ ನಾಣ್ಯ ಹೊರಗೆ ಬರಲೇ ಇಲ್ಲ! ಮೂರು ಬಾರಿ ಎಕ್ಸರೇ ತೆಗೆದಾಗ ಅದು ಸಣ್ಣ ಕರುಳಿನಿಂದ ದಾಟಿ ದೊಡ್ಡ ಕರುಳಿನ ಸಮೀಪ ಇರುವುದು ಗೊತ್ತಾಗಿದೆ. ಆದರೆ ಅದು ಮಲ ವಿಸರ್ಜನೆಯಲ್ಲಿ ಹೊರಗೆ ಬಾರಲೇಇಲ್ಲ. ಇದರಿಂದ ಆತಂಕಗೊಂಡ ಬಾಲಕಿಯ ಪೋಷಕರು ಸೀದಾ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದರು.
ಶುಕ್ರವಾರ ಬೆಳಿಗ್ಗೆ ವೈದ್ಯರು ಬಾಯಿಯ ಮೂಲಕ ಅತ್ಯಾಧುನಿಕ ಯಂತ್ರವನ್ನು ಒಳಗೆ ಬಿಟ್ಟು ನಾಣ್ಯವನ್ನು ಹೊರತೆಗೆದರು. ಬೆಳ್ಳಿಯ ರೀತಿಯಲ್ಲಿ ಹೊಳೆಯುತ್ತಿದ್ದ ನಾಣ್ಯ ಹೊರಗೆ ಬರುವಾಗ ಕಪ್ಪು ಬಣ್ಣಕ್ಕೆ ತಿರುಗಿದ್ದು ಕಂಡುಬಂದಿತು. ಈಗ ಬಾಲಕಿ ಚೇತರಿಸಿಕೊಂಡಿದ್ದು, ಒಣ ಮೀನು ವ್ಯಾಪಾರಸ್ಥರಾಗಿರುವ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.