ಸಾಗರ: ಬ್ಯಾಂಕ್‌ನಿಂದ ಬ್ಯಾಂಕ್ ಮಿತ್ರರನ್ನು ವಜಾಗೊಳಿಸಿರುವ ನೀತಿ ಖಂಡಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವ ವಜಾ ಉದ್ಯೋಗಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.
ಶಕುಂತಲಾ ಆತ್ಮಹತ್ಯೆಗೆ ಪ್ರಯತ್ನಿಸಿದ ಬ್ಯಾಂಕ್ ಮಿತ್ರ ಉದ್ಯೋಗಿ ಎಂದು ತಿಳಿದು ಬಂದಿದೆ
ಕೆಳದಿಯಲ್ಲಿ ಗುರುವಾರದಿಂದ ಬ್ಯಾಂಕ್ ಮಿತ್ರರ ಸಂಘ ಮತ್ತು ಮಾನವಹಕ್ಕುಗಳ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಕರ್ನಾಟಕ ರಕ್ಷಣಾ ವೇದಿಕೆ, ದೀವರ ಯುವ ವೇದಿಕೆ ಸಹಯೋಗದೊಂದಿಗೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯುತ್ತಿದೆ. ಈ ವೇಳೆ ತೊಡಗಿಕೊಂಡ ವಜಾ ಉದ್ಯೋಗಿ ಶಕುಂತಲಾ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಶಕುಂತಲಾ ಅವರನ್ನು ನಗರದ ಉಪವಿಭಾಗೀಯ ಆಸ್ಪತ್ರೆಗೆ ಸೇರಿಸಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಬ್ಯಾಂಕ್ ಮಿತ್ರರನ್ನು ನೇಮಕ ಮಾಡಿಕೊಳ್ಳುವ ಕಾರ್ಪೊರೇಟ್ ಕಂಪನಿಗಳು ಮೂರು ವರ್ಷಕ್ಕೊಮ್ಮೆ ಬದಲಾಗುತ್ತದೆ. ಹೊಸಹೊಸ ಕಂಪನಿಗಳು ಮತ್ತೊಂದು ನೀತಿಯನ್ನು ತಂದು ಬ್ಯಾಂಕ್ ಮಿತ್ರರ ಶೋಷಣೆಗೆ ಇಳಿದಿದೆ.
ಹಿಂದಿನ ವಿಷನ್ ಇಂಡಿಯಾ ಕಂಪನಿ ಬ್ಯಾಂಕ್ ಮಿತ್ರರಿಂದ 50 ಸಾವಿರ ಡೆಪಾಸಿಟ್ ಪಡೆದಿತ್ತು. ಆದರೆ ತಮ್ಮ ವಾಯಿದೆ ಮುಗಿದ ನಂತರ ಬ್ಯಾಂಕ್ ಮಿತ್ರರಿಗೆ ಡಿಪಾಸಿಟ್ ಹಣ ವಾಪಾಸ್ ಕೊಟ್ಟಿಲ್ಲ. ಹೊಸ ಕಂಪನಿ ಗ್ರಾಮ ತರಂಗ ಇನ್ನೊಂದಿಷ್ಟು ಡಿಪಾಸಿಟ್ ನೀಡಲು ಒತ್ತಾಯಿಸುತ್ತಿದೆ.
ಬಡ ಬ್ಯಾಂಕ್ ಮಿತ್ರರು ಹಣ ಪಾವತಿ ಮಾಡಲಾಗದೆ ಪರದಾಡುವ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಕೆಳದಿಯಲ್ಲಿ ನಡೆಯುತ್ತಿರುವ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದ್ದರೂ ಸಂಬಂಧಿಸಿದ ಯಾರೂ ಸ್ಪಂದಿಸಿಲ್ಲದ ಕಾರಣ ಹತಾಶೆಗೆ ಒಳಗಾದ ಶಕುಂತಲಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.