Advertisement

‘ಪಳಕಳ ಸೀತಾರಾಮ ಭಟ್ಟ ರಸ್ತೆ’ಫಲಕ ಕೆಡವಿದ ಪುಂಡರು

11:41 PM Sep 01, 2021 | Team Udayavani |

ಮೂಡುಬಿದಿರೆ: ಶಿಕ್ಷಕರ ದಿನಾಚರಣೆ ಹತ್ತಿರವಾಗುತ್ತಿದ್ದಂತೆ ಒಂದಕ್ಷರ ಕಲಿತ, ಕಲಿಸಿದವರಿಗೆ, ಸಾಹಿತಿಗಳಿಗೆ, ಸಾಹಿತ್ಯಾಭಿಮಾನಿ ಸಜ್ಜನ ನಾಗರಿಕರಿಗೆ ಆಘಾತಕಾರಿಯಾದ ಘಟನೆಯೊಂದು ಮೂಡುಬಿದಿರೆ ಪಕ್ಕದ ಪುತ್ತಿಗೆ ಗ್ರಾಮ ಪಂಚಾಯತ್‌ನ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಪುತ್ತಿಗೆ ಗ್ರಾಮದಲ್ಲಿ ಪಳಕಳ ಸೀತಾರಾಮ ಭಟ್ಟರ ಮನೆಯತ್ತ ಸಾಗುವ ರಸ್ತೆಗೆ ಇರಿಸಲಾಗಿದ್ದ `ಪಳಕಳ ಸೀತಾರಾಮ ಭಟ್ಟ ರಸ್ತೆ ‘ ನಾಮಫಲಕವನ್ನು ಬುಧವಾರ ಯಾರೋ ಕೆಡವಿ ಹಾಕಿದ್ದಾರೆ!

ಶಿಕ್ಷಕರಾಗಿ ಮಕ್ಕಳ ಮನಗೆದ್ದ ಪಳಕಳ ಸೀತಾರಾಮ ಭಟ್ಟರ ಪದ್ಯಗಳು 1956ರ ಕಾಲಕ್ಕೇ ಕನ್ನಡ ಪಠ್ಯಪುಸ್ತಕಗಳಲ್ಲಿ ಪ್ರಕಟವಾಗಿದ್ದು ಇಂದಿಗೂ ಮಕ್ಕಳ ಸಾಹಿತ್ಯ ರಂಗದಲ್ಲಿ ಅವರೊಂದು ಲೆಜೆಂಡ್ ಆಗಿ ಉಳಿದವರು.

ರಾಷ್ಟ್ರಮಟ್ಟದ ಬಾಲಸಾಹಿತ್ಯ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಯುಗಪುರುಷ ದಿಂದ `ಬಾಲ ಮನೋ ವಿಜ್ಞಾನಿ ‘ ಬಿರುದು ಸಹಿತ ಸಮ್ಮಾನ, ಕೋ. ಅ. ಉಡುಪ ಸಂಸ್ಮರಣ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸೇರಿದಂತೆ ಹಲವಾರು ಪ್ರಶಸ್ತಿ, ಗೌರವಗಳಿಗೆ ಪಾತ್ರರಾದ , ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿರುವ, ಸರಳ ಸಜ್ಜನ ಮಗು ಮನಸ್ಸಿನ ಪಳಕಳರ ನೂರಕ್ಕೂ ಅಧಿಕ ಪುಸ್ತಕಗಳು ಕಿನ್ನಿಗೋಳಿಯ ಯುಗಪುರುಷದಿಂದಲೇ ಪ್ರಕಟವಾಗಿದ್ದು ಇಷ್ಟೇ ಸಂಖ್ಯೆಯ ಇತರ ಅಂದರೆ, ಮಕ್ಕಳ ಕತೆ, ಕವನ, ನಾಟಕ, ರೂಪಕ, ಪ್ರಹಸನ, ಜೀವನಚರಿತ್ರೆ, ಪ್ರಬಂಧ, ಪತ್ರಲೇಖನ ಅಲ್ಲದೆ, ಕಿರು ಕಾದಂಬರಿ ಮತ್ತಿತರ ಸಾಹಿತ್ಯ ಕೃತಿಗಳು ಅನ್ಯ ಪ್ರಕಾಶಕರಿಂದ ಪ್ರಕಟವಾಗಿವೆ. ಪಳಕಳರ ಕುರಿತು ಡಾ| ಕಾರ್ತ್ಯಾಯಿನಿ ಕುಂಜಿಬೆಟ್ಟು ಡಾಕ್ಟರೇಟ್ ಗಳಿಸಿದ್ದಾರೆ.

ಊರ ಶಾಲೆಗೆ ಬೆಂಕಿ ಬಿದ್ದಾಗ ಊರವರನ್ನೆಲ್ಲ ಒಗ್ಗೂಡಿಸಿ ಮತ್ತೆ ಶಾಲೆಗೆ ಕಾಯಕಲ್ಪ ನೀಡಿದವರು. ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ನೆರವಾದವರು.

Advertisement

ಇಂಥ ರಾಷ್ಟ್ರಮಟ್ಟದ ಮಹಾನುಭಾವರ ನಾಮಫಲಕ ಒಡೆದು ಹಾಕಿರುವ ಘಟನೆ ನಾಡಿನ ಸಜ್ಜನರೆಲ್ಲ ತಲೆತಗ್ಗಿಸುವಂತೆ ಮಾಡಿದೆ.

ಪುತ್ತಿಗೆ ಪಂಚಾಯತ್‌ನ ಈ ಹಿಂದಿನ ಅಭಿವೃದ್ಧಿ ಅಧಿಕಾರಿಯವರ ಆಡಳಿತಾವಧಿಯಲ್ಲಿ ಇರಿಸಲಾಗಿದ್ದ ಕ್ರಿಯಾಯೋಜನೆಯನ್ವಯ ಎಂಟು ತಿಂಗಳ ಹಿಂದೆ ಪಂ. ಮೂರನೇ ವಾರ್ಡ್ (ನೆಲ್ಲಿಗುಡ್ಡೆ-ಕಾಯರ್‌ಪುಂಡು-ಎನಿಕ್ರಿಪಲ್ಲ -ಪಳಕಳ)ನಲ್ಲಿ ಮುಖ್ಯ ರಸ್ತೆಯ ತೀರಾ ಪಕ್ಕದಲ್ಲೇ ಸ್ಥಾಪಿಸಲಾಗಿತ್ತು. ಈ ಸ್ಥಳವು ರಾಜ್ಯಹೆದ್ದಾರಿಯ ಅಂಚಿನಲ್ಲೇ ಇರುವುದು ಹೌದೆಂದು ಈಗಿನ ಪಿಡಿಓ ತಿಳಿಸಿದ್ದು ಗುರುವಾರ ಮುಂದಿನ ಕ್ರಮ ಜರಗಿಸುವುದಾಗಿ ತಿಳಿಸಿದ್ದಾರೆ. ಪಂಚಾಯತ್ ಅಧ್ಯಕ್ಷ ಪ್ರವೀಣ ಶೆಟ್ಟಿಯವರೂ ಈ ಕೃತ್ಯದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next