ಮಂಗಳೂರು: ನಗರ ಹೊರವಲಯದ ಕಾಟಿಪಳ್ಳದ ರೌಡಿಶೀಟರ್ ಪಿಂಕಿ ನವಾಝ್ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದ 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಸುರತ್ಕಲ್ ಹಾಗೂ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾಟಿಪಳ್ಳ ಕೃಷ್ಣಾಪುರ ನಿವಾಸಿಗಳಾದ ಪ್ರಕಾಶ್ ಭಂಡಾರಿ (29), ಶಾಕೀರ್(29) ಶೈಲೇಶ್ ಪೂಜಾರಿ (19), ಹನೀಫ್ (20), ಸುವಿನ್ ಕಾಂಚನ್ (23), ಲಕ್ಷ್ಮೀಶ್ (26), ಅಹ್ಮದ್ ಸಾದಿಕ್ (23), ನಿಸಾರ್ ಹುಸೈನ್ (29), ರಂಜನ್ ಶೆಟ್ಟಿ (24) ಬಂಧಿತ ಆರೋಪಿಗಳು.
ಇದನ್ನೂ ಓದಿ:ಮೈಸೂರಿನ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಭಾಗಿ
ಪ್ರಕರಣದ ವಿವರ: ಫೆ.10ರಂದು ಸಂಜೆ ವೇಳೆ ಕಾಟಿಪಳ್ಳದ 2ನೇ ಬ್ಲಾಕ್‌ನಲ್ಲಿರುವ ಟಿಕ್‌ಟಾಕ್ ಗಾರ್ಡನ್ ಬಳಿ ಪಿಂಕಿ ನವಾಝ್ ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೆ ಯತ್ನಿಸಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಸುರತ್ಕಲ್ ಪೊಲೀಸರು ಕೊಲೆಯತ್ನ ನಡೆಸಿದ ಆರೋಪದಲ್ಲಿ ನಾಲ್ವರು ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ಐವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ ಕಾರು, ಮಾರಕಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಹಳೆ ದ್ವೇಷದಿಂದಲೇ ಕೃತ್ಯ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಎಂಟು ಮಂದಿಯ ಮೇಲೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ಹಲವು ಕೇಸುಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.