ಕನಕಪುರ: ಮೋಜು-ಮಸ್ತಿ ಮಾಡುತ್ತಿದ್ದ ಮೂವರು ಕಿಡಿಗೇಡಿಗಳು ಬಾಲಕರಿಗೆ ಮಧ್ಯ ಕುಡಿಸಿ, ವಿಕೃತಿ ಮೆರೆದಿದ್ದಾರೆ. ಈ ಘಟನೆ ಸಂಬಂಧ ಕೋಡಿಹಳ್ಳಿ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲೂಕಿನ ಕೋಡಿಹಳ್ಳಿ ಹೋಬಳಿಯ ಮರಳೆಪುರ ಗ್ರಾಮದ ಕರಿಯಪ್ಪ ಅಲಿಯಾಸ್ ಸೋಮಸುಂದರ್ ಬಂಧಿತ ಆರೋಪಿ. ಅರುಣ ಅನಾರೋಗ್ಯದಿಂದ ಕ್ವಾರಂಟೈನ್ ಆಗಿದ್ದಾನೆ. ಘಟನೆ ನಡೆದ ತೋಟದ ಮಾಲೀಕ ಪ್ರಮೋದ್ ಪರಾರಿಯಾಗಿದ್ದಾನೆ.
ತಾಲೂಕಿನ ಕೋಡಿಹಳ್ಳಿ ಹೋಬಳಿಯ ಮರಳೆಪುರ ಗ್ರಾಮದ ಪ್ರಮೋದ್ ಎಂಬುವರಿಗೆ ಸೇರಿದ ಬಾಳೆ ತೋಟದಲ್ಲಿ ಕಳೆದ ಮೇ 30ರಂದು ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಮೋಜು-ಮಸ್ತಿ ಮಾಡಲು ಅರುಣ, ಕರಿಯಪ್ಪ, ಪ್ರಮೋದ್ ಇವರು ಬಾಳೆ ತೋಟದಲ್ಲಿ ಸೇರಿದರು.
ಶಾಲೆಗಳು ರಜೆ ಇರುವ ಕಾರಣ ಬಾಲಕರು ಆಟವಾಡಲು ಆಕಸ್ಮಿಕವಾಗಿ ಬಾಳೆ ತೋಟದ ಕಡೆಗೆ ಬಂದಿದ್ದಾರೆ. ಮೂವರು ಆರೋಪಿಗಳು ಬಾಲಕರಿಗೆ ಮಾಂಸದೂಟದ ಆಸೆ ತೋರಿಸಿ, ಮದ್ಯ ನೀಡಿ ಇದು ಜ್ಯೂಸ್ ಎಂದು ಕುಡಿಯಿರಿ ಕುಡಿಸಿದ್ದಾರೆ.
ಮಕ್ಕಳ ಸ್ಥಿತಿ ಚಿತ್ರೀಕರಣ: ಮದ್ಯ ಕುಡಿದ ಮತ್ತಿನಲ್ಲಿ ಮಕ್ಕಳು ಒಬ್ಬರಿಗೊಬ್ಬರು ನಿಂದನೆ ಮಾಡಿಕೊಂಡಿದ್ದಾರೆ. ಮಕ್ಕಳ ಸ್ಥಿತಿಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡಿದ್ದಾರೆ. ಏಳು ವರ್ಷದ ಬಾಲಕನೊಬ್ಬ ಮದ್ಯ ಸೇವಿಸಿ, ನನಗೆ ಇನ್ನು ಮದ್ಯ ಬೇಕು ಎಂದು ಪಟ್ಟು ಹಿಡಿದು, ತಮ್ಮ ಪೋಷಕರನ್ನು ಸ್ನೇಹಿತರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೃಶ್ಯ ನೋಡಿದವರು, ಸಾರ್ವಜನಿಕರು, ಪೋಷಕರು ಆತಂಕ ವ್ಯಕ್ತಪಡಿಸಿ, ಮುಂದಿನ ಸಮಾಜದ ಭವಿಷ್ಯ ರೂಪಿಸಬೇಕಾದ ಮಕ್ಕಳಿಗೆ ತಪ್ಪು ದಾರಿ ತೋರಿಸಿ, ವಿಕೃತಿ ಮೆರೆದಿರುವ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದೆ. ಪಾರಾರಿಯಾಗಿರುವ ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದು, ಕ್ವಾರಂಟೈನ್‌ನಲ್ಲಿರುವ ಆರೋಪಿಯನ್ನು ಕೋವಿಡ್ ನೆಗಟಿವ್ ವರದಿ ಬಂದ ಬಳಿಕ ವಶಕ್ಕೆ ಪಡೆದುಕೊಳ್ಳಲಿದ್ದಾರೆ.
ಸಿಡಿಪಿಒ ಮಂಜುನಾಥ್ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಎಲ್ಲ ಮಕ್ಕಳಿಗೂ ಆರೋಗ್ಯ ತಪಾಸಣೆ ಮಾಡಿ, ಮಕ್ಕಳು ಮತ್ತು ಪೋಷಕರೊಂದಿಗೆ ಆಪ್ತ ಸಮಾಲೋಚನೆ ನಡೆಸಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಜೊತೆ ವಿಡಿಯೋ ಸಂವಾದ ನಡೆಸಿ, ಈ ಘಟನೆಸಂಬಂಧ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ರಮೇಶ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.