ಕಲಬುರಗಿ: ಮನೆಯೊಂದರಲ್ಲಿ ಆಕ್ಮಸಿಕ ಬೆಂಕಿ ಹತ್ತಿ ಒಂದು ಲಕ್ಷ ರೂ. ನಗದು ಮತ್ತು ಬಟ್ಟೆ-ಬರೆ ಸೇರಿದಂತೆ ಗೃಹಪಯೋಗಿ ವಸ್ತುಗಳು ಸುಟ್ಟು ಕರಕಲಾದ ಘಟನೆ ಶುಕ್ರವಾರ ಬೆಳಗ್ಗೆ ನಗರದ ಗುಲಾಬವಾಡಿಯಲ್ಲಿ ನಡೆದಿದೆ. ಸಿದ್ದಪ್ಪ ಪಸ್ತಾಪುರ ಎನ್ನುವವರು ವಾಸಿಸುತ್ತಿದ್ದ ಬಾಡಿಗೆ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಖಾಸಗಿ ವಾಹನ ಚಾಲಕನಾಗಿರುವ ಸಿದ್ದಪ್ಪ ಕೆಲಸ ನಿಮಿತ್ತ ತೆರಳಿದ್ದರು.
ಪತ್ನಿ ಸಂಗೀತಾ ಮನೆಗೆಲಸ ಮಾಡುತ್ತಿದ್ದು, ಅವರು ಮನೆಯಲ್ಲಿ ಇರಲಿಲ್ಲ. ಮೂವರು ಮಕ್ಕಳು ಶಾಲೆಗೆ ಹೋಗಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಮನೆಯಲ್ಲಿ ಏಕಾಏಕಿಬೆಂಕಿ ಹೊತ್ತಿಕೊಂಡಿತ್ತು. ಸ್ವಲ್ಪ ದೂರದಲ್ಲೇ ನೀರು ತುಂಬುತ್ತಿದ್ದ ಇತರ ಮಹಿಳೆಯರು ಇದನ್ನು ಗಮನಿಸಿದ್ದರು. ಆಗ ಸ್ಥಳೀಯರೇ ನೀರು ಹಾಕಿ ನಂದಿಸುವ ಪ್ರಯತ್ನ ಮಾಡಿ, ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದರು.
ತಕ್ಷಣವೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸಂಪೂರ್ಣ ಬೆಂಕಿ ನಂದಿಸಿದರು. ಅಷ್ಟರಲ್ಲೇ ಮನೆಯಲ್ಲಿನ ಬಹುತೇಕ ವಸ್ತುಗಳು ಸುಟ್ಟು ಹಾನಿಯಾಗಿವೆ. ಬೆಂಕಿಯ ಕೆನ್ನಾಲಿಗೆಗೆ ಬಟ್ಟೆಗಳು, ಹಾಸಿಗೆ, ದವಸ-ಧಾನ್ಯಗಳು, ಗೃಹಪಯೋಗಿ ವಸ್ತುಗಳು, ಪಿಠೊಪಕರಣಗಳು ಮತ್ತು ಮಕ್ಕಳ ಪುಸ್ತಕಗಳು ನಾಶವಾಗಿದೆ. ಮನೆಯಲ್ಲಿ ಗ್ಯಾಸ್ ಸೋರಿಕೆಯಿಂದ ಬೆಂಕಿ ಅವಘಡ ನಡೆದಿರುವ ಶಂಕೆ ವ್ಯಕ್ತವಾಗಿದೆ. ನಿಧಾನವಾಗಿ ಗ್ಯಾಸ್ ಲೀಕ್ ಆಗಿದ್ದು, ವಿದ್ಯುತ್ ಸ್ಪಾರ್ಕ್ ಅಥವಾ ಯಾವುದೋ ಬೆಂಕಿ ಸ್ಪರ್ಶವಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪರುಶುರಾಮ ತಿಳಿಸಿದ್ದಾರೆ.
ಇದನ್ನೂ ಓದಿ:ತಲಕಾವೇರಿ ದೇವಸ್ಥಾನಕ್ಕೆ ಭೇಟಿ ನೀಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಬೆಂಕಿ ಅನಾಹುತದಲ್ಲಿ ಅಲ್ಮಾರಿ ಮತ್ತು ಸೂಟ್‌ಕೇಸ್ ಸುಟ್ಟಿವೆ. ಸಂಗೀತಾ ಅವರು ಸ್ವ-ಸಹಾಯ ಸಂಘದಿಂದ ಒಂದು ಲಕ್ಷ ರೂ. ಸಾಲ ಮಾಡಿ ಮನೆಯಲ್ಲಿ ತಂದು ಇಟ್ಟಿದ್ದರು. ಆ ಹಣವೂ ಬೆಂಕಿಗೆ ಆಹುತಿಯಾಗಿವೆ ಎಂದು ಮನೆಯ ಯಜಮಾನ ಸಿದ್ದಪ್ಪ ಪಸ್ತಾಪುರ ಆಳಲು ತೋಡಿಕೊಂಡಿದ್ದಾರೆ.