ಹುಣಸೂರು: ಹಾಡು ಹಗಲೇ ಚಿರತೆ ದಾಳಿ ನಡೆಸಿ ಮೇಕೆಯನ್ನು ಕೊಂದು ಹಾಕಿರುವ ಘಟನೆ ತಾಲೂಕಿನ ಕಪ್ಪನಕಟ್ಟೆ ಹಾಡಿಯಲ್ಲಿ ನಡೆದಿದೆ.
ನಾಗರಹೊಳೆ ಉದ್ಯಾನವನದಂಚಿನ ತಾಲೂಕಿನ ಹನಗೋಡು ಹೋಬಳಿಯ ಕಪ್ಪನಕಟ್ಟೆ ಹಾಡಿಯ ಲೇ.ಆನೆರಾಜರ ಪತ್ನಿ ಚಿನ್ನಮ್ಮರವರಿಗೆ ಸೇರಿದ ಮೇಕೆ ಇದಾಗಿದ್ದು. ಮನೆ ಬಳಿಯೇ ಮೇಯುತ್ತಿದ್ದ ಮೇಕೆಯ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದ್ದು, ಹಾಡಿಯವರು ಕೂಗಿಕೊಂಡ ವೇಳೆ ಚಿರತೆಯು ಮೇಕೆಯನ್ನು ಬಿಟ್ಟು ಕಾಡಿನತ್ತ ಓಡಿ ಹೋಗಿದೆ.
ಕಪ್ಪನಕಟ್ಟೆ ಹಾಡಿ ಉದ್ಯಾನವನದಂಚಿನಲ್ಲೇ ಇದ್ದು ಹಾಡು ಹಗಲೇ ಚಿರತೆ ದಾಳಿ ನಡೆಸಿ ಮೇಕೆಯನ್ನು ಕೊಂದು ಹಾಕಿರುವುದರಿಂದ ಹಾಡಿಯ ಜನ ಭಯಬೀತರಾಗಿದ್ದಾರೆ.
ವಿಷಯ ತಿಳಿದ ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ ಚಂದ್ರೇಶ್ ಹಾಗೂ ಸಿಬ್ಬಂದಿಗಳು ಧಾವಿಸಿ ಮಹಜರ್ ನಡೆಸಿದ್ದಾರೆ.
ಮತ್ತೆ ಚಿರತೆ ಕಾಣಿಸಿಕೊಂಡಲ್ಲಿ ಮಾಹಿತಿ ನೀಡಿ ಬೋನ್ ಇರಿಸಿ ಚಿರತೆ ಸೆರೆಗೆ ಕ್ರಮವಹಿಸಲಾಗುವುದೆಂದು ತಿಳಿಸಿದ್ದಾರೆ.