Advertisement

ಪ್ರೀತಿಸುತ್ತಿದ್ದ ಯುವತಿ ಜತೆಗಿನ ಫೋಟೋ,ವಿಡಿಯೋ ಬಹಿರಂಗ ಪಡಿಸುವ ಬೆದರಿಕೆ

02:30 PM Mar 14, 2021 | Team Udayavani |

ಹುಬ್ಬಳ್ಳಿ: ಪ್ರೀತಿಸುತ್ತಿದ್ದ ಯುವತಿಯೊಂದಿಗಿನ ಫೋಟೋ, ವಿಡಿಯೋ ಮಾಧ್ಯಮಗಳಿಗೆ ಬಹಿರಂಗ ಪಡಿಸುವುದಾಗಿ 5 ಲಕ್ಷ ರೂ.ಗೆ ಬ್ಲ್ಯಾಕ್‌ಮೇಲ್‌ ಮಾಡಿದ್ದ ತಂಡದ ಇಬ್ಬರನ್ನು ಗೋಕುಲ ರಸ್ತೆ ಪೊಲೀಸರು ಶನಿವಾರ ಬಂಧಿಸಿದ್ದು, ಪ್ರಮುಖ ಆರೋಪಿ ಶಕ್ತಿ ದಾಂಡೇಲಿ ಇನ್ನಿತರರು ತಲೆಮರೆಸಿಕೊಂಡಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ವಿದ್ಯಾನಗರ ಕಾಳಿದಾಸ ನಗರದ ರಾಹುಲ ಪ್ರಭು, ಹನುಮಂತ ನಗರದ ಮಂಜು ಕೆ. ಬಂಧಿತರಾಗಿದ್ದಾರೆ. ಇಲ್ಲಿನ ಲಿಂಗರಾಜ ನಗರದ ಕುಮಾರಸ್ವಾಮಿ ಎಂಬಾತನು ಮೂಲತಃ ಕುಂದಗೋಳ ತಾಲೂಕು ಸಂಶಿಗ್ರಾಮದ ಇಲ್ಲಿನ ಕಾಳಿದಾಸ ನಗರದ ಪಿಜಿಯಲ್ಲಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ನಂತರ ಅವಳನ್ನು ನಿರಾಕರಿಸಲು ಮುಂದಾದಾಗ ಅವಳು ಕರೆ ಮಾಡಿ ಅವಾಚ್ಯವಾಗಿ ನಿಂದಿಸುವುದು, ನಾವು ಮಾತನಾಡಿದ ಆಡಿಯೋ ರಿಕಾರ್ಡ್‌ ಎಲ್ಲರಿಗೂ ಕೇಳಿಸುವೆ ಎಂದು ಬ್ಲ್ಯಾಕ್‌ ಮೇಲ್‌ ಮಾಡಿದ್ದಾಳೆ. ಶುಕ್ರವಾರ ಕಾಳಿದಾಸ ನಗರ ಹನುಮಂತ ದೇವರ ಗುಡಿ ಬಳಿ ಕರೆಯಿಸಿದ್ದಾಳೆ. ಅಲ್ಲಿಗೆ ಕುಮಾರಸ್ವಾಮಿ ಹೋದಾಗ ರಾಹುಲ ಪ್ರಭು ಎಂಬುವನು ಮೊಬೈಲ್‌, ಬೈಕ್‌ ಕೀಲಿ ಕಿತ್ತುಕೊಂಡಿದ್ದಾನೆ. ಆಟೋ ರಿಕ್ಷಾದಲ್ಲಿ ಬಂದಿದ್ದ ಮಂಜು ಮತ್ತು ಇನ್ನೊಬ್ಬ ಸೇರಿ ಮೂವರು ಅವನನ್ನು ಅಪಹರಿಸಿಕೊಂಡು ಅಕ್ಷಯ ಕಾಲೋನಿಯಲ್ಲಿರುವ ಶಕ್ತಿ ದಾಂಡೇಲಿಯ ಕಚೇರಿಗೆ ಕರೆದೊಯ್ದಿದ್ದಾರೆ. ಅಲ್ಲಿ ಕೂಡಿ ಹಾಕಿ ರಾಹುಲ ಪ್ರಭು, ಮಂಜು ಕೆ., ಸಂತೋಷ ಬ್ಯಾಹಟ್ಟಿ ಸೇರಿದಂತೆ 8-10ಜನರು ಸೇರಿಕೊಂಡು ಲಾಠಿ, ಸುತ್ತಿಗೆಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ.

ಅಲ್ಲದೆ ಶಕ್ತಿ ದಾಂಡೇಲಿಯು ಯುವತಿಯೊಂದಿಗೆ ಇದ್ದ ಫೋಟೋ, ವಿಡಿಯೋಗಳನ್ನು ಮಾಧ್ಯಮಕ್ಕೆ ಕೊಟ್ಟು, ಕೇಸ್‌ ಮಾಡುತ್ತೇವೆ. 5ಲಕ್ಷ ರೂ. ಕೊಡು ಇಲ್ಲವಾದರೆ ಜೀವಸಹಿತ ಬಿಡುವುದಿಲ್ಲವೆಂದು ಹೆದರಿಸಿದ್ದಾನೆ. ಈ ಕುರಿತು ಕುಮಾರಸ್ವಾಮಿ ಗೋಕುಲ ರಸ್ತೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಾಹುಲ ಪ್ರಭು ಮತ್ತು ಮಂಜು ಕೆ.ಅವರನ್ನು ಬಂಧಿಸಿದ್ದಾರೆ. ಶಕ್ತಿ ದಾಂಡೇಲಿ ಸೇರಿ ಇನ್ನುಳಿದವರು ಪರಾರಿಯಾಗಿದ್ದಾರೆ. ಇದೊಂದು ಹನಿಟ್ರ್ಯಾಪ್‌ ಪ್ರಕರಣವೆಂದು ಹೇಳಲಾಗುತ್ತಿದೆ.

ಕಾನ್‌ಸ್ಟೇಬಲ್‌ಗ‌ಳನ್ನು ಅಡ್ಡಗಟ್ಟಿ ಹಲ್ಲೆ :

ಧಾರವಾಡ: ಹು-ಧಾ ಸಶಸ್ತ್ರ ಮೀಸಲು ಪಡೆಯ ಕಚೇರಿಗೆ ಹೋಗುತ್ತಿದ್ದ ಇಬ್ಬರು ಪೊಲೀಸ್‌ ಕಾನ್‌ ಸ್ಟೇಬಲ್‌ಗ‌ಳನ್ನು ಮೂವರು ಅಡ್ಡಗಟ್ಟಿ ಹಲ್ಲೆಮಾಡಿರುವ ಘಟನೆ ತಾಲೂಕಿನ ಇಟಿಗಟ್ಟಿ ಕ್ರಾಸ್‌ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ.

Advertisement

ನಾಗೇಶ ಬ್ಯಾಟಗೇರ ಹಾಗೂ ಉದಯ ಭಂಡಾರಿ ಎಂಬ ಪೊಲೀಸ್‌ ಸಿಬ್ಬಂದಿಯೇ ಹಲ್ಲೆಗೊಳಗಾದವರು.ಕರ್ತವ್ಯಕ್ಕೆ ಹೋಗುವಾಗಲೇ ಮೂವರು ಬೈಕ್‌ನ್ನು ಅಡ್ಡಗಟ್ಟಿ ಕುಡಿದ ಅಮಲಿನಲ್ಲಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ನಾಗೇಶ ಬ್ಯಾಟಗೇರಗೆ ತೀವ್ರಗಾಯಗಳಾಗಿದ್ದು, ಮತ್ತೋರ್ವ ಪೊಲೀಸ್‌ಸಿಬ್ಬಂದಿಗೆ ಒಳಪೆಟ್ಟಾಗಿದೆ. ತಕ್ಷಣವೇ ಘಟನಾ ಸ್ಥಳಕ್ಕೆಎಸ್‌ಪಿ ಪಿ. ಕೃಷ್ಣಕಾಂತ ಹಾಗೂ ಪೊಲೀಸ್‌ ಆಯುಕ್ತಲಾಬುರಾಮ್‌ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಹಲ್ಲೆಗೊಳಗಾದ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆದಾಖಲಿಸಲಾಗಿದೆ. ಹಲ್ಲೆ ಮಾಡಿ ಪರಾರಿಯಾದವರ ಪತ್ತೆಗೆ ತನಿಖೆ ನಡೆಸಲಾಗುತ್ತಿದ್ದು, ಹಲ್ಲೆಗೆ ಕಾರಣ ಏನೆಂಬುದು ಗೊತ್ತಾಗಿಲ್ಲ ಎಂದು ಎಸ್‌ಪಿ ಪಿ ಕೃಷ್ಣಕಾಂತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next