Advertisement

ಕ್ರೈಂ ಧಾರಾವಾಹಿ ನೋಡಿ ಬಾಲಕನನ್ನು ಅಪಹರಿಸಿ ಕೊಲೆಗೈದವರ ಸೆರೆ

04:24 PM Mar 13, 2021 | Team Udayavani |

ಹಾವೇರಿ: ಸ್ಥಳೀಯ ಅಶ್ವಿ‌ನಿನಗರದ ತೇಜಸ್‌ ಗೌಡ ಜಗದೀಶ ಮಲ್ಲಿಕೇರಿ(11)ಎಂಬ ಬಾಲಕ ಅಪಹರಣಕ್ಕೊಳಗಾಗಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿ ವಿಶ್ವೇಶತೀರ್ಥ ನಗರದ ರಿತೀಶ ಬಸಪ್ಪ ಮೇಟಿ (20) ಹಾಗೂ ಆತನ ಸಹೋದರ 17 ವರ್ಷದ ಬಾಲಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಕಳೆದ ಮಾ.7ರಂದು ಅಶ್ವಿ‌ನಿನಗರದ 1ನೇ ಕ್ರಾಸ್‌ನ ನಿವಾಸಿ 11 ವರ್ಷದ ತೇಜಸ್‌ಗೌಡ ಮಧ್ಯಾಹ್ನ 3.20ರಸುಮಾರಿಗೆ ಮನೆಯ ಓಣಿಯಲ್ಲಿ ಹೋಗಿದ್ದವ ನಾಪತ್ತೆಯಾಗಿದ್ದ. ಈ ಕುರಿತು ಬಾಲಕನ ತಂದೆ ಜಗದೀಶ ಮಲ್ಲಿಕೇರಿ ಮಾ.8ರಂದು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕೆಲವು ಸುಳಿವುಗಳ ಜಾಡು ಹಿಡಿದು ಶುಕ್ರವಾರ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ

ಕುರಿತು ಶುಕ್ರವಾರ ಎಸ್ಪಿ ಕೆ.ಜಿ.ದೇವರಾಜು ಮಾಹಿತಿ ನೀಡಿ, ಬಾಲಕನ ನಾಪತ್ತೆ ಪ್ರಕರಣ ಕೊಲೆಯಲ್ಲಿಅಂತ್ಯವಾಗಿರುವುದು ಆರೋಪಿಗಳನ್ನು ವಿಚಾರಿಸಿದಾಗ ತಿಳಿದು ಬಂದಿದೆ. ನಾಪತ್ತೆಯಾಗಿದ್ದ ಬಾಲಕನನ್ನು ಹುಡುಕಿಕೊಡುವಂತೆ ಹಾಗೂ ಅಪಹರಣದ ಸಂಶಯವಿರುವುದಾಗಿ ದೂರುದಾರರು ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ವಿಜಯಕುಮಾರಸಂತೋಷ ಮಾರ್ಗದರ್ಶನದಲ್ಲಿ ತಂಡ ರಚಿಸಿ ನಾಪತ್ತೆಯಾದ ಬಾಲಕನ ಶೋಧ ಕಾರ್ಯನಡೆಸಲಾಯಿತು. ಆರೋಪಿಗಳನ್ನು ಶುಕ್ರವಾರ ಬಂಧಿಸಿ ವಿಚಾರಿಸಲಾಗಿದ್ದು, ಟಿವಿಯಲ್ಲಿ ಬರುತ್ತಿದ್ದ ಕ್ರೈಂ ಧಾರಾವಾಹಿಗಳನ್ನು ನೋಡಿ ಅದರಿಂದ ಪ್ರೇರಣೆಗೊಂಡು ದಿಢೀರ್‌ ಹಣ ಗಳಿಸಲು ಬಾಲಕನನ್ನು ಅಪಹರಣ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆಂದು ತಿಳಿಸಿದರು. ಮಾ.7ರಂದು ಬಾಲಕ ತನ್ನ ಮನೆಯಿಂದ ನಡೆದುಕೊಂಡು ಬರುತ್ತಿದ್ದಾಗ ತಮ್ಮ ಕಾರಿನಲ್ಲಿ ಆತನನ್ನು ಅಪಹರಣ ಮಾಡಿ ಆತಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಗೋಣಿ ಚೀಲದಲ್ಲಿ ಶವವನ್ನು ತುಂಬಿ ಹೆಗ್ಗೇರಿ ಕೆರೆಯಲ್ಲಿ ಮುಳುಗಿಸಿದ್ದರು. ಮಾ.10ರಂದು ಶವ ನೀರಿನ ಮೇಲೆದ್ದು ದಡಕ್ಕೆ ಬಂದಿದ್ದನ್ನು ಗಮನಿಸಿದ ಆರೋಪಿಗಳು ತಮ್ಮ ಕಾರಿನಲ್ಲಿ ಶವವನ್ನು ಹಾಕಿಕೊಂಡು ಮನೆಯ ಹಿತ್ತಲಿನಲ್ಲೇ ಗುಂಡಿ ತೋಡಿ ಹೂಳಲು ಪ್ರಯತ್ನಿಸಿದರು.

ಶವದ ವಾಸನೆ ಬರುತ್ತಿರುವುದರಿಂದ ಸಮೀಪದ ಉದ್ಯಾನವನದಲ್ಲಿ ಹೂಳಲು ಯತ್ನಿಸಿದ್ದರು. ಅದು ಯಶಸ್ವಿಯಾಗದ್ದರಿಂದ ಸಮೀಪದ ದೇವರಾಜ ಅರಸು ಹಾಸ್ಟೆಲ್‌ ಪಕ್ಕದ ಗಿಡಗಂಟಿ ಬೆಳೆದಿದ್ದ ಖಾಲಿ ಜಾಗದಲ್ಲಿ ಶವ ಎಸೆದು ಪೆಟ್ರೋಲ್‌ ಹಾಕಿ ಸುಟ್ಟಿದ್ದರು. ಬಳಿಕ ಹೆದರಿದ ಆರೋಪಿಗಳು ಕೊಲೆಗೆ ಬಳಸಿದ ಕಾರಿನಲ್ಲಿ ಮಾ.10ರಂದು ಮೊಬೈಲ್‌ ಸಿಮ್‌ ತೆಗೆದು ಹಾಕಿ ತಲೆಮರೆಸಿಕೊಂಡಿದ್ದರು.

Advertisement

ಮಕ್ಕಳ ಸಂಶಯಾಸ್ಪದ ನಡೆ ಬಗ್ಗೆ ಆರೋಪಿಗಳ ಪಾಲಕರಿಗೆ ಸಂಶಯ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿಚಾರಣೆ ಇಡೀ ಕೃತ್ಯದ ಬಗ್ಗೆ ಆರೋಪಿಗಳು ಬಾಯಿಬಿಟ್ಟಿದ್ದಾರೆ ಎಂದು ಎಸ್ಪಿ ದೇವರಾಜು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನಬಾಲದಂಡಿ, ಡಿವೈಎಸ್ಪಿ ವಿಜಯಕುಮಾರ ಸಂತೋಷ, ಇನ್ಸ್‌ಪೆಕ್ಟರ್‌ ಪ್ರಹ್ಲಾದ ಚನ್ನಗಿರಿ, ಪಿಎಸ್‌ಐ ಹೊಸಮನಿ ಇದ್ದರು.

ದಿಢೀರ್‌ ಶ್ರೀಮಂತರಾಗುವ ಯೋಜನೆ :

ಆರೋಪಿಗಳು ಕೊಲೆ ಮಾಡಿ ಬಾಲಕ ಬದುಕಿದ್ದಾನೆಂದು ನಂಬಿಸಿ ಬಾಲಕನ ಪಾಲಕರಿಂದ ಹಣಕ್ಕೆ ಬೇಡಿಕೆ ಇಡುವ ಯೋಜನೆ ರೂಪಿಸಿದ್ದರು. ಕೆಲ ದಿನಗಳ ಬಳಿಕ ಬಾಲಕನ ಪಾಲಕರಿಗೆ ಕರೆ ಮಾಡಿಹಣಕ್ಕೆ ಬೇಡಿಕೆ ಇಟ್ಟು ದಿಢೀರ್‌ ಶ್ರೀಮಂತರಾಗುವ ಯೋಜನೆ ಮಾಡಿಕೊಂಡಿದ್ದರು. ಆದರೆ,ನಾಲ್ಕು ದಿನಗಳಲ್ಲಿ ಪೊಲೀಸರು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ರಿತೀಶ್‌ಮೇಟಿ ಪಿಯುಸಿ ಫೇಲ್‌ ಆಗಿ ನಾಲ್ಕು ವರ್ಷಗಳಿಂದ ಖಾಲಿ ಇದ್ದ. ಆತನ ತಮ್ಮ ಈ ಸಲ ದ್ವಿತೀಯ ಪಿಯುಸಿ ಓದುತ್ತಿದ್ದ. ಇಬ್ಬರೂ ಕ್ರೈಂ ಧಾರಾವಾಹಿ ನೋಡುವುದರಲ್ಲೇ ಕಾಲ ಕಳೆಯುತ್ತಿದ್ದರು ಎಂದು ಎಸ್‌ಪಿ ಕೆ.ಜಿ.ದೇವರಾಜು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next