Advertisement

ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸಮಸ್ಯೆ ಇತ್ಯರ್ಥ

11:32 AM Jun 12, 2021 | Team Udayavani |

ಹರಿಹರ: ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ್ದ ಕ್ಷೌರಿಕನ ವರ್ತನೆ ಖಂಡಿಸಿ ದಲಿತರು ಕ್ಷೌರಿಕನ ಜತೆ ವಾಗ್ವಾದ ನಡೆಸಿದ ಘಟನೆ ತಾಲೂಕಿನ ಧೂಳೆಹೊಳೆ ಗ್ರಾಮದಲ್ಲಿ ಶುಕ್ರವಾರ ನಡೆಯಿತು.

Advertisement

ಸಾಮಾನ್ಯವಾಗಿ ಹರಿಹರದಲ್ಲೆ ಕ್ಷೌರ ಮಾಡಿಸುತ್ತಿದ್ದ ಗ್ರಾಮದ ದಲಿತರು ಲಾಕ್‌ಡೌನ್‌ ಕಾರಣಕ್ಕೆ ನಗರಕ್ಕೆ ಬರಲಾಗದೆ ಶುಕ್ರವಾರ ಬೆಳಗ್ಗೆ ಸ್ಥಳೀಯ ಅಂಗಡಿಗೆ ತೆರಳಿದ್ದು, ಕ್ಷೌರಿಕ ಅಣ್ಣಪ್ಪ, ನಿಮಗೆ ಕ್ಷೌರ ಮಾಡಿದರೆ ಇತರೆ ಜನಾಂಗದವರು ನನ್ನ ಬಳಿ ಕ್ಷೌರಕ್ಕೆ ಬರುವುದಿಲ್ಲ, ಆದ ಕಾರಣ ನಿಮಗೆ ಕ್ಷೌರ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಇದರಿಂದ ಕೆರಳಿದ ದಲಿತರು ನಮಗೆ ಏಕೆ ಕ್ಷೌರ ಮಾಡಲ್ಲ, ನಾವು ಹರಿಹರಕ್ಕೆ ಹೋಗಿ ಬರಲು ಇನ್ನೂರು ರೂ. ಖರ್ಚಾಗುತ್ತದೆ. ಅಲ್ಲದೆ ಈಗ ಲಾಕ್‌ಡೌನ್‌ ಬೇರೆ, ನಾವು ಹಣ ನೀಡಿದರೂ ನೀನೇಕೆ ಕ್ಷೌರ ಮಾಡಲ್ಲ ಎಂದು ವಾಗ್ವಾದ ನಡೆಸಿದ್ದಾರೆ. ಆದರೂ ಕ್ಷೌರಿಕ ಒಪ್ಪದಿದ್ದಾಗ ದಲಿತ ಸಮಾಜದ ಯುವಕರು ಸಮಾಜ ಕಲ್ಯಾಣಾಧಿಕಾರಿಗಳಿಗೆ ಫೋನ್‌ ಮಾಡಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದಾರೆ.

ಕೂಡಲೆ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಸೈಯದ್‌ ನಾಸಿರುದ್ದೀನ್‌ ಪೊಲೀಸರೊಂದಿಗೆ ಗ್ರಾಮಕ್ಕೆ ತೆರಳಿ ಕ್ಷೌರಿಕನಿಗೆ, ಜಾತಿ, ಜನಾಂಗ ಆಧರಿಸಿ ಕ್ಷೌರ ಮಾಡುವುದಿಲ್ಲ ಎಂದರೆ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ನಿನ್ನ ವಿರುದ್ಧ ಕ್ರಿಮಿನಲ್‌ ಕೇಸ್‌ ಹಾಕಬೇಕಾಗುತ್ತೆ. ಅವರಿವರ ಮಾತು ಕೇಳಬೇಡ, ದೂರು ದಾಖಲಾದರೆ ನಿನ್ನ ಸಹಾಯಕ್ಕೆ ಯಾರೂ ಬರುವುದಿಲ್ಲ ಎಂದು ತಿಳಿಸಿದರು.

ಸ್ಥಳದಲ್ಲಿದ್ದ ಇತರೆ ಜನಾಂಗದವರಿಗೂ ಕೂಡ, ಗ್ರಾಮದಲ್ಲಿ ಎಲ್ಲಾ ಜಾತಿ, ಜನಾಂಗದವರೂ ಇರುತ್ತಾರೆ. ಈ ರೀತಿ ಕ್ಷೌರದ ವಿಷಯದಲ್ಲಿಯೂ ತಾರತಮ್ಯ ಮಾಡುವುದು ಬೇಡ. ನಿಮ್ಮ ಒತ್ತಡದಿಂದಾಗಿ ಕ್ಷೌರಿಕ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ, ನೀವೂ ತಪ್ಪಿತಸ್ಥರಾಗುತ್ತೀರಿ ಎಂದು ಎಚ್ಚರಿಸಿದರು.

Advertisement

ಆಗ ಕ್ಷೌರಿಕ ಅಣ್ಣಪ್ಪ ಹಾಗೂ ಗ್ರಾಮಸ್ಥರು ಇಂತಹ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದಾಗ ಪ್ರಕರಣ ಸುಖಾಂತ್ಯ ಕಂಡಿತು. ಲಾಕ್‌ಡೌನ್‌ ಮುಗಿದ ನಂತರ ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗುವುದು ಎಂದು ನಾಸಿರುದ್ದೀನ್‌ ಗ್ರಾಮಸ್ಥರಿಗೆ ತಿಳಿಸಿದರು.

ದಸಂಸ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್‌, ಪಿಡಿಒ ಮೌನೇಶಾಚಾರ್‌,ಗ್ರಾಪಂ ಸದಸ್ಯರಾದ ಶಿಲ್ಪಾ ಹುಚ್ಚೆಂಗೆಪ್ಪ, ಮಾಜಿ ಸದಸ್ಯ ಎ.ಪರಶುರಾಮ, ಮಲ್ಲಪ್ಪ ಕೆ., ಮಂಜಪ್ಪಎ., ಶ್ರೀನಿವಾಸ್‌, ಕಟ್ಟೆಪ್ಪ, ನಿಂಗರಾಜ್‌, ಅಣ್ಣಪ್ಪ, ಹವಳೆಪ್ಪ, ರೇವಣಪ್ಪ, ಬಸಪ್ಪ, ಕೋಟೆಪ್ಪ ಇತರರು ಇದ್ದರು.

ಕೋವಿಡ್‌ ಸಂಕಷ್ಟದಲ್ಲೂ ಕೆಲವರು ಮಾನವೀಯತೆ ಮರೆತು, ಜಾತಿ, ಮತಗಳ ಎತ್ತಿಕಟ್ಟಿ ತಾರತಮ್ಯ ಮಾಡುತ್ತಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಇಂದಿಗೂ ದೇವಸ್ಥಾನ, ಹೋಟೆಲ್‌, ಕ್ಷೌರದಂಗಡಿ ದಲಿತರಿಗೆ ನಿಷಿದ್ಧ. ಅಧಿಕಾರಿಗಳು, ಮಠಾ ಧೀಶರು, ಜನಪ್ರತಿನಿಧಿ ಗಳು, ಸಮಾಜ ಸುಧಾರಕರು ಒಟ್ಟಾಗಿ ಅಸ್ಪೃಶ್ಯತೆಗೆ ಕೊನೆ ಹಾಡಬೇಕಿದೆ.– ಪಿ.ಜೆ.ಮಹಾಂತೇಶ್‌, ದಸಂಸ ತಾಲೂಕು ಸಂಚಾಲಕ.

Advertisement

Udayavani is now on Telegram. Click here to join our channel and stay updated with the latest news.

Next