ಗುಡಿಬಂಡೆ: ಹರಿಯುತ್ತಿರುವ ಭಾರೀ ನೀರಿನಲ್ಲಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಕೊಚ್ಚಿ ಹೋದ ಘಟನೆ ನೇಮಿಲುಗುರ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನೀರಿನಲ್ಲಿ ಕೊಚ್ಚಿ ಹೋದ ಗ್ರಾಮ ಪಂಚಾಯಿತಿ ಸದಸ್ಯನ ಹೆಸರು ಗಂಗಾಧರ ಎಂದು ತಿಳಿದು ಬಂದಿದೆ.
ಸುಮಾರು ತಿಂಗಳಿಂದ ಎಡಬಿಡದೆ ಬಿದ್ದ ಮಳೆಯಿಂದ ಕೆರೆ ಕಾಲುವೆಗಳು ಹರಿಯುತ್ತಿದೆ.ಇದರ ಜೊತೆಯಲ್ಲೇ ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಚಂಡಮಾರುತದಿಂದ ಈಗ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಈ ಮಳೆಯಲ್ಲೇ ಗ್ರಾಮಕ್ಕೆ ಹೋಗಲು ನೇಮಿಲುಗುರ್ಕಿ ಗ್ರಾಮದ ಸದಸ್ಯ ದ್ವಿಚಕ್ರ ವಾಹನದಲ್ಲಿ ರಸ್ತೆ ಮೇಲೆ ಹರಿಯುತ್ತಿರುವ ನೀರನ್ನು ದಾಟಲು ಪಯತ್ನಿಸಿದ್ದಾರೆ. ಆ ಸಮಯದಲ್ಲಿ ದ್ವಿಚಕ್ರ ವಾಹನ ಕೆಳಗೆ ಬಿದ್ದರಿಂದ ಅದನ್ನು ಮೇಲೆ ಎತ್ತಲು ಪ್ರಯತ್ನ ಮಾಡುವಾಗ ಗ್ರಾಮ ಪಂಚಾಯಿತಿ ಸದಸ್ಯನ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ದ್ವಿಚಕ್ರ ವಾಹನ ಕೆಳಗೆ ಬೀಳುತ್ತಲೇ ಅಲ್ಲಿಯೇ ಇದ್ದ ವೃದ್ಧನೊಬ್ಬ ಗಂಗಾಧರ ಅವರ ಸಹಾಯಕ್ಕೆ ಧಾವಿಸುತ್ತಾರೆ, ಆದರೆ ಅವರಿಬ್ಬರ ಕೈಯಲ್ಲಿ ಗಾಡಿ ಮೇಲೇತ್ತಲು ಸಾಧ್ಯವಾಗುವುದಿಲ್ಲ, ಆ ಸಮಯದಲ್ಲಿ ಆತನ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾರೆ.
ತಕ್ಷಣ ಗ್ರಾಮಸ್ಥರು ಬ್ಯಾಟರಿ ಹಾಗೂ ಮೊಬೈಲ್ ಲೈಟ್ ಗಳ ಮೂಲಕವೇ ಮಳೆಯನ್ನು ಲೆಕ್ಕಿಸದೆ ಕಾಲುವೆ ದಡದ ಮೇಲೆ ಸುಮಾರು 10 ಕಿ.ಮೀಗೂ ಹೆಚ್ಚು ದೂರ ಹೋಗಿ ಹುಡುಕಾಟ ನಡೆಸುತ್ತಿದ್ದಾರೆ.
ಅಗ್ನಿಶಾಮಕ ದಳದಿಂದ ಮತ್ತು ಪೊಲೀಸ್ ಸಿಬ್ಬಂದಿಯಿಂದ ಹುಡುಕಾಟ ನಡೆಸುತ್ತಿದ್ದು, ಸ್ಥಳದಲ್ಲೇ ಆಂಬ್ಯುಲೆನ್ಸ್ ಮತ್ತು ವೈದ್ಯರು ಸಹ ಬೀಡು ಬಿಟ್ಟಿದ್ದಾರೆ.