ದೊಡ್ಡಬಳ್ಳಾಪುರ: ಇತ್ತೀಚೆಗೆ ತಾಲೂಕಿನಲ್ಲಿ ಗೃಹಪ್ರವೇಶ, ನೂತನ ದೇವಾಲಯ ಉದ್ಘಾಟನೆ ಸೇರಿದಂತೆ ಹಲವಾರು ಶುಭ ಸಮಾರಂಭ ಆರಂಭವಾದ ಕಾರಣ ತೆಂಗಿನ ತೋಟ, ಮಾವಿನ ತೋಟ ಹಾಗೂ ಬಾಳೆ ತೋಟಗಳಲ್ಲಿ ಕಳವು ಪ್ರಕರಣ ಮಿತಿ ಮೀರಿದ್ದು, ರೈತರು ಹಗಲು- ರಾತ್ರಿಯೆನ್ನದೆ ಕಾದುಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೋಳಾಗಿ ನಿಂತ ತೆಂಗಿನ ಮರಗಳು:ತಾಲೂಕಿನ ನಂದಿಬೆಟ್ಟದ ತಪ್ಪಲಿನ ಮೇಳೆಕೋಟೆ ಸುತ್ತಮುತ್ತಲಿನಗ್ರಾಮಗಳ ರೈತರ ತೋಟಗಳಲ್ಲಿ ಗರಿ,ಮಾವಿನ ಸೊಪ್ಪು ಕಳವಾಗಿದ್ದು, ಮೇಳೆಕೋಟೆ ಗ್ರಾಮವೊಂದರಲ್ಲೇ ನಂಜೇಗೌಡ, ನಾರಾಯಣಪ್ಪ, ಮೋಹನ್, ಲಕ್ಷ್ಮಮ್ಮ ಎಂಬುವರ ತೋಟಗಳಲ್ಲಿನ ತೆಂಗಿನಮರಗಳಲ್ಲಿಗರಿಗಳಿಲ್ಲದೆ ಬೋಳಾಗಿ ನಿಂತಿವೆ.
ರಾತ್ರಿ ವೇಳೆ ಕಳವು: ಮದುವೆ ಮನೆಗಳ ಮುಂದೆ ಚಪ್ಪರ ಹಾಕಲು ತೆಂಗಿನ ಗರಿ,ತೋರಣಕ್ಕೆ ಮಾವಿನ ಸೊಪ್ಪು ಹಾಗೂ ಗೊನೆ ಬಂದಿರುವ ಅಥವಾ ಚೆನ್ನಾಗಿ ಬೆಳೆದಿರುವ ಬಾಳೆಕಂದನ್ನು ಬಳಸಲಾಗುತ್ತದೆ. ಆದರೆ, ಹೂವು ಬಿಟ್ಟಿರುವ ಮಾವಿನ ಮರಗಳಲ್ಲಿ ರೈತರು ಮಾವಿನ ಸೊಪ್ಪನ್ನು ಕೀಳಲು ರೈತರುಬಿಡುವುದಿಲ್ಲ. ಅಂತೆಯೇ ತೆಂಗಿನ ಗರಿ ಕತ್ತರಿಸಿದರೆ ಗೊನೆ ಮುರಿದು ಬೀಳುತ್ತದೆ ಎನ್ನುವ ಕಾರಣದಿಂದ ತೆಂಗಿನ ಗರಿಗಳನ್ನು ಹಣ ನೀಡಿದರೂ ಕತ್ತರಿಸಲು ಬಿಡುವುದಿಲ್ಲ. ಈ ಎಲ್ಲ ಕಾರಣದಿಂದ ಶುಭ ಸಮಾರಂಭಗಳಿಗೆ ತೆಂಗಿನಗರಿಗಳಿಗಾಗಿ ರಾತ್ರಿ ವೇಳೆ ತೋಟಗಳಿಗೆ ನುಗ್ಗಿ ಕಳವು ಮಾಡಲಾಗುತ್ತಿದೆ.
ದೂರು ನೀಡಲು ಗೊಂದಲ :
ಯಾವುದಾದರು ವಸ್ತುಗಳು ಕಳುವಾದರೆ ಪೊಲೀಸರಿಗೆ ದೂರು ನೀಡಬಹುದು. ಆದರೆ, ತೆಂಗಿನ ಗರಿ, ಮಾವಿನ ಸೊಪ್ಪು, ಬಾಳೆ ಕಂದು(ಗಿಡ)ಗಳು ಕಳುವಾಗುತ್ತಿವೆ ಎಂದು ಯಾವ ರೀತಿ ದೂರು ನೀಡುವುದು ಎನ್ನುವುದೇ ಗೊಂದಲವಾಗಿದೆ. ಹೀಗಾಗಿ ಮದುವೆಗಳು ಹೆಚ್ಚಾಗಿರುವ ಒಂದೆರಡು ದಿನಗಳ ಮೊದಲೇ ತೋಟಗಳಲ್ಲಿ ಕಾವಲು ಆರಂಭಿಸುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.