ಚಿಕ್ಕಬಳ್ಳಾಪುರ: ಗೆಳೆಯರೊಂದಿಗೆ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬ ಅನುಮಾನಸ್ಪದವಾಗಿ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದ ಬಳಿಯ ದಪ್ಪರ್ತಿ ಒಡ್ಡುನಲ್ಲಿ ಘಟನೆ ನಡೆದಿದೆ.
ತಾಲೂಕಿನ ದಪ್ಪರ್ತಿ ಗ್ರಾಮದ ನರಸಿಂಹಪ್ಪ(40) ಮೃತಪಟ್ಟ ನತದೃಷ್ಠ. ನರಸಿಂಹಪ್ಪ ಎಂದಿನಂತೆ ಸ್ಥಳೀಯ ನಾಲ್ಕು ಜನ ಸ್ನೇಹಿತರೊಂದಿಗೆ ಮೀನು ಹಿಡಿಯಲು ಹೋಗಿದ್ದಾನೆ ಮೀನಿನ ಬಲೆ ಮತ್ತು ಬಟ್ಟೆಗಳನ್ನು ದಪ್ಪರ್ತಿ ಒಡ್ಡಿನ ದಡದಲ್ಲಿಟ್ಟು ನೀರಿಗೆ ಹಾರಿದ್ದಾರೆ ಹೊಂಡದಲ್ಲಿದ್ದ ಹೂಳಲ್ಲಿ ಸಿಲುಕಿದ್ದರಿಂದ ಈಜಲು ಆಗದೆ ನರಸಿಂಹಪ್ಪ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ : ಮಂಡ್ಯ ಜಿಲ್ಲೆಯಲ್ಲಿ ಚೇತರಿಕೆ ಕಾಣದ ಚಿತ್ರಮಂದಿರಗಳು
ನರಸಿಂಹಪ್ಪ ರಾತ್ರಿ ಮನೆಗೆ ಬಾರದಿದ್ದಾಗ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಗ್ರಾಮದಲ್ಲಿ ಹುಡುಕಾಡಿದ್ದಾರೆ ಆದರೇ ನರಸಿಂಹಪ್ಪನ ಬಟ್ಟೆ ಮತ್ತು ಬಲೆ ಕೆರೆಯ ಬಳಿಯಿದ್ದಾಗ ಅನುಮಾನಗೊಂಡು ಕೆರೆಯಲ್ಲಿ ಹುಡುಕಾಡಿದ್ದಾರೆ ನಂತರ ಅಗ್ನಿ ಶಾಮಕದಳದವರಿಗೆ ಮಾಹಿತಿ ನೀಡಿದ್ದಾರೆ ಆದರೇ ಶನಿವಾರದಂದು ಕತ್ತಲಲ್ಲಿ ಹುಡುಕಾಟ ನಡೆಸಲು ಸಾಧ್ಯವಾಗದೆ ಭಾನುವಾರದಂದು ಶೋಧನೆ ಕಾರ್ಯವನ್ನು ಮುಂದುವರೆಸಿದ ಅಗ್ನಿಶಾಮಕದಳದ ಸಿಬ್ಬಂದಿ ನರಸಿಂಹಪ್ಪನ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ.
ಸ್ಥಳಕ್ಕೆ ಗುಡಿಬಂಡೆ ಸಿಪಿಐ ಎಂಎಂ ಮಂಜುನಾಥ್, ಪಿಎಸ್‍ಐ ಗೋಪಾಲ್‍ರೆಡ್ಡಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.