ಬೆಂಗಳೂರು: ಬೀಗ ಹಾಕಿದ ಮನೆಯನ್ನು ನಕಲಿ ಕೀ ಬಳಸಿ ಮನೆಯಲ್ಲಿದ್ದ 90 ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದ ಪಶ್ಚಿಮ ಬಂಗಾಳ ಮೂಲದ ಇಬ್ಬರು ಆರೋಪಿಗಳು ಕೇವಲ 1,600 ರೂ. ಖರ್ಚು ಮಾಡಿ ಬಾಗಲಗುಂಟೆ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಶುಭಂಕಲ್ ಶಿಲ್ಲು(30) ಹಾಗೂ ಸಂಜು ಸಹಾ (28) ಬಂಧಿತರು. ಅವರಿಂದ ಲಕ್ಷಾಂತರ ರೂ. ಜಪ್ತಿ ಮಾಡಲಾಗಿದೆ. ಬಾಗಲಗುಂಟೆಯ ಎಂಎಚ್‌ಆರ್ ಬಡಾವಣೆ ನಿವಾಸಿ ಈರಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಈರಪ್ಪ ಅವರು ಮನೆಯ ನವೀಕರಣ ಹಾಗೂ ಮೊಮ್ಮಗನ ಎಂಬಿಬಿಎಸ್ ವ್ಯಾಸಂಗಕ್ಕಾಗಿ 90 ಲಕ್ಷ ರೂ. ಅನ್ನು ಕೂಡಿಟ್ಟಿದ್ದರು. ಅದೇ ವೇಳೆ ಲಾಕ್ ಡೌನ್ ಜಾರಿಯಾಗಿದ್ದರಿಂದ ಮೇ 23 ರಂದು ಮನೆಗೆ ಬೀಗ ಹಾಕಿ ಚಿಂತಾಮಣಿಯಲ್ಲಿರುವ ಮಗನ ಮನೆಗೆ ಹೋಗಿದ್ದರು.ಇದೇ ವೇಳೆ ಆರೋಪಿಗಳು ಚಿಂದಿ ಆಯುವ ನೆಪದಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದರು. ಬಳಿಕ ರಾತ್ರಿ ವೇಳೆನಕಲಿ ಕೀ ಬಳಸಿ ಅಥವಾ ಬಾಗಿಲು ಮುರಿದು ಮನೆಯಲ್ಲಿ ಕಳವು ಮಾಡುತ್ತಿದ್ದರು.
ಈರಪ್ಪ ಅವರ ಮನೆ ಬೀಗ ಹಾಕಿರುವುದು ಮತ್ತು ಅವರ ಮನೆ ಮುಂದೆ ಸಿಸಿ ಕ್ಯಾಮೆರಾ ಇಲ್ಲದಿರುವುದನ್ನು ಗಮನಿಸಿದ ಆರೋಪಿಗಳು ನಕಲಿ ಕೀ ಬಳಸಿ ಮನೆಗೆ ನುಗ್ಗಿದ್ದಾರೆ. ಬಳಿಕ ಮನೆಯ ಬೀರುವಿನಲ್ಲಿದ್ದ 90 ಲಕ್ಷ ರೂ. ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಈರಪ್ಪ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆಂಧ್ರ ಪೊಲೀಸರಿಂದ ಬಂಧನ : ಲಾಕ್‌ಡೌನ್ ವೇಳೆ ಕದ್ದ ಹಣದ ಸಮೇತ ಪಶ್ಚಿಮ ಬಂಗಾಳಕ್ಕೆ ಹೋಗಲು ಸಿದ್ಧತೆ ನಡೆಸಿದ್ದ ಆರೋಪಿಗಳು, ಬಾಗಲಗುಂಟೆಯಿಂದ ಕೆ.ಆರ್.ಪುರಂಗೆ ಗೂಡ್ಸ್ ವಾಹನಲ್ಲಿ ಬಂದಿದ್ದಾರೆ. ಬಳಿಕ ಪಶ್ಚಿಮ ಬಂಗಾಳಕ್ಕೆ ತೆರಳಲು ಕಾರೊಂದನ್ನು 40 ಸಾವಿರ ರೂ.ಗೆ ಬಾಡಿಗೆ ಪಡೆದು ಮೇ 3ರಂದು ಬೆಂಗಳೂರಿನಿಂದ ಹೊರಟಿದ್ದಾರೆ. ಮಾರ್ಗ ಮಧ್ಯೆ ಚಿತ್ತೂರಿನ ಪಲಂನೂರು ಬಳಿ ಪೊಲೀಸರು ಕಾರನ್ನು ತಪಾಸಣೆ ನಡೆಸಿದಾಗ ಲಕ್ಷಾಂತರ ರೂ. ಸಿಕ್ಕಿದೆ. ನಂತರ ಪೊಲೀಸರ ವಿಚಾರಣೆಯಲ್ಲಿ ಬೆಂಗಳೂರಲ್ಲಿ ಕಳ್ಳತನ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಈ ಮಾಹಿತಿ ಮೇರೆಗೆ ಬಾಗಲಗುಂಟೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗಬಂದಿದೆ.
1,600 ಖರ್ಚು: ಕಳವು ಮಾಡಿದ 90 ಲಕ್ಷ ರೂ. ಪೈಕಿ ಆರೋಪಿಗಳು ತಮ್ಮ ವೈಯಕ್ತಿಕ ಖರ್ಚು ಎಂದು ಕೇವಲ 1600 ರೂ. ವ್ಯಯಿಸಿದ್ದಾರೆ. ಇನ್ನುಳಿದ ಹಣವನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದರು. ಇದೀಗ ಅಷ್ಟು ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.