ಬೆಂಗಳೂರು: ಕೆಲಸ ಮಾಡುತ್ತಿದ್ದ ಜ್ಯುವೆಲ್ಲರಿ ಶಾಪ್‌ನ ಗೋಡೆ ಕೊರೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ನೇಪಾಳ ಮೂಲದ ಭದ್ರತಾ ಸಿಬ್ಬಂದಿ ಸೇರಿ ಆರು ಮಂದಿ ಪುಲಕೇಶಿನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನೇಪಾಳ ಮೂಲದ ಬೀರೇಂದರ್ ಸುನಾರ್(29), ಗೋರ್ಖಾ ಸುನಾರ್(30), ಬಾಲ್ ಬಹದ್ದೂರ್ ವಿಶ್ವಕರ್ಮ(30), ಪುರನ್ ಸುನಾರ್(27), ರಮೇಶ್ ದಿವಾಲಿ(28), ಗೋವಿಂದ್ ಕುಮಾರ್(32) ಬಂಧಿತರು. ಆರೋಪಿಗಳಿಂದ 14 ಲಕ್ಷ ರೂ. ಮೌಲ್ಯದ 70 ಗ್ರಾಂ ಚಿನ್ನಾಭರಣ, 13. 610 ಕೆ.ಜಿ. ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪುಲಿಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಲ್ಸ್ ರಸ್ತೆಯ ಶ್ಲೋಕ್ ಜ್ಯುವೆಲ್ಲರಿ ಶಾಪ್‌ನಲ್ಲಿ ನೇಪಾಳ ಮೂಲದ ಬೀರೇಂದರ್ ಸುನಾರ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಮಳಿಗೆಯಲ್ಲಿ ಚಿನ್ನಾಭರಣ, ಬೆಳ್ಳಿ ಸಾಮಾಗ್ರಿಗಳನ್ನು ಎಲ್ಲೆಲ್ಲಿ ಇಡುತ್ತಾರೆ ಎಂಬ ಬಗ್ಗೆ ಮಾಹಿತಿ ಹೊಂದಿದ್ದ. ಹೀಗಾಗಿ, ಮಳಿಗೆಯಲ್ಲಿ ದರೋಡೆ ಸಂಚು ರೂಪಿಸಿ, ನಂತರ ಹೊಸಕೋಟೆ,ಕೆ.ಆರ್.ಪುರಂ ವ್ಯಾಪ್ತಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುವ ನೇಪಾಳ ಮೂಲದವರನ್ನು ಕರೆಸಿಕೊಂಡಿದ್ದ ಎಂದು ಪೊಲೀಸರು ಹೇಳಿದರು.
ನಂತರ ಜ.27ರಂದು ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 10 ಸಾವಿರ ರೂ. ಕದ್ದು ಪರಾರಿಯಾಗಿದ್ದರು. ಮರುದಿನ ಮಳಿಗೆ ಬಾಗಿಲು ತೆರೆಯಲು ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಮಾಲೀಕ ನಿರ್ಮಲ್ ಕುಮಾರ್ ದಲಾಲ್ ಪುಲಿಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಕಳ್ಳತನವಾಗಿರುವ ಜ್ಯುವೆಲರಿ ಶಾಪ್ ಹಾಗೂ ಅದೇ ಮಾರ್ಗದಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳರ ಸುಳಿವು ಸಿಕ್ಕಿತ್ತು. ಅದೇ ವೇಳೆ ಮಳಿಗೆಯ ಭದ್ರತಾ ಸಿಬ್ಬಂದಿ ನಾಪತ್ತೆಯಾಗಿದ್ದ. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.