ಬೆಂಗಳೂರು: ದುಬಾರಿ ಬೆಲೆಯ ಬಟ್ಟೆ ಖರೀದಿ ಸೇರಿದಂತೆ ಪತ್ನಿಯ ಐಶಾರಾಮಿ ಜೀವನಕ್ಕೆ ಬೇಸತ್ತು ಪತಿ ನೇಣಿಗೆ ಶರಣಾಗಿರುವ ಘಟನೆ ಬಸವೇಶ್ವರನಗರ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ನಡೆದಿದೆ.
ಮೆಕಾನಿಕ್ ಕೆಲಸ ಮಾಡುತ್ತಿದ್ದ ಚಾಂದ್‌ಪಾಷಾ (31) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.
ಕೌಟುಂಬಿಕ ಕಲಹ ದಿಂದ ಮೊದಲ ಪತ್ನಿಯಿಂದ ದೂರವಾಗಿದ್ದರು. ಆ ಹಿನ್ನೆಲೆ ಚಾಂದ್ ಪಾಷಾ ಕಳೆದ 4 ತಿಂಗಳ ಹಿಂದಷ್ಟೇ ಉಸ್ಮಾ (26) ಎಂಬಾಕೆಯನ್ನು ಮದುವೆಯಾಗಿದ್ದ. ಚಾಂದ್ ಪಾಷಾ ಪತ್ನಿ ಉಸ್ಮಾಗೆ ಐಷಾರಾಮಿ ಜೀವನದ ಗೀಳಿತ್ತು. ಆ ಹಿನ್ನೆಲೆ ಯಲ್ಲಿಯೇ ದುಬಾರಿ ಬಟ್ಟೆ ಧರಿಸುವುದು. ಚಿನ್ನಾಭರಣ ಖರೀದಿಸುವುದು, ಪ್ರತಿನಿತ್ಯ ಹೊರಗೆ ಸುತ್ತಾಡಿ ಐಶಾರಾಮಿ ಜೀವನ ನಡೆಸುವ ಅಭಿಲಾಷೆಯನ್ನು ಪತಿಯ ಜತೆ ವ್ಯಕ್ತಪಡಿಸುತ್ತಿದ್ದಳು.
ಆದರೆ, ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಪತಿ ಚಾಂದ್‌ಪಾಷಾ ತಾನು ಗಳಿಸುತ್ತಿದ್ದ ಆದಾಯದಲ್ಲಿ ಪತ್ನಿಯ ಐಶಾರಾಮಿ ಆಕಾಂಕ್ಷೆಗಳನ್ನು ಈಡೇರಿಸುವುದು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಪ್ರತಿದಿನ ಪತಿ- ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು.
ಪ್ರತಿದಿನದಂತೆ ಸೋಮವಾರ ರಾತ್ರಿ ದಂಪತಿ ನಡುವೆ ಜಗಳ ನಡೆದಿತ್ತು. ಪತ್ನಿ ರೂಂನಲ್ಲಿ ಮಲಗಿದ್ದರೆ, ಪತಿ ಹಾಲ್ ನಲ್ಲಿ ಮಲಗಿದ್ದ. ಪತ್ನಿಯ ಆಕಾಂಕ್ಷೆ ಈಡೇರಿಸಲು ಆಗುತ್ತಿಲ್ಲ ಎಂದು ನೊಂದಿದ್ದ ಚಾಂದ್‌ಪಾಷಾ, ತಡರಾತ್ರಿ ಹಾಲ್ ನಲ್ಲೇ ನೇಣಿಗೆ ಶರಣಾಗಿದ್ದಾನೆ.
ಮಂಗಳವಾರ ಬೆಳಗ್ಗೆ ಪತ್ನಿ ಹಾಲ್‌ಗೆ ಬಂದಾಗ ವಿಷಯ ಬೆಳಕಿಗೆ ಬಂದಿತ್ತು. ಉಸ್ಮಾ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಬಸವೇಶ್ವರ ನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.