ಬೆಂಗಳೂರು: ಕೆಲಸಕ್ಕೆ ಹೋಗುವಂತೆ ಪೋಷಕರು ಬುದ್ದಿಮಾತು ಹೇಳಿದಕ್ಕೆ ಬೇಸರಗೊಂಡ ಪುತ್ರನೊಬ್ಬ ಚಾಕುವಿ ನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಗಜೀವನರಾಮ್ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜೆ.ಜೆ.ನಗರ 11ನೇ ಕ್ರಾಸ್ ನಿವಾಸಿ ಸೈಯದ್ ಸಾಹಿಲ್(23) ಮೃತ ಯುವಕ. ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮನೆಯಲ್ಲಿ ತರಕಾರಿ ಕತ್ತರಿಸುವ ಚಾಕುತೆಗೆದುಕೊಂಡು ಹೊಟ್ಟೆಗೆ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.
ಏನಿದು ಘಟನೆ?: ಆಟೋ ಚಾಲಕ ಅಬ್ಟಾಸ್ ದಂಪತಿಗೆ ಮೂರು ಹೆಣ್ಣು ಮತ್ತು ಒಬ್ಬ ಗಂಡು ಸೇರಿ ನಾಲ್ವರು ಮಕ್ಕಳು. ಈ ಪೈಕಿ ಇಬ್ಬರು ಹೆಣ್ಣು ಮಕ್ಕಳಿಗೆ ಈಗಾಗಲೇ ಮದುವೆಯಾಗಿದ್ದು, ಗಂಡನ ಮನೆಯಲ್ಲಿ ವಾಸವಾಗಿದ್ದಾರೆ. ಅಬ್ಟಾಸ್ ದಂಪತಿ ಹಾಗೂ ಮೂವರು ಮಕ್ಕಳು ಜೆ.ಜೆ.ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಸಾಹಿಲ್ ಗುಜರಿ ಕೆಲಸಕ್ಕೆ ಹೋಗುತ್ತಿದ್ದ. ಇತ್ತೀಚೆಗೆ ಸರಿಯಾಗಿ ಕೆಲಸಕ್ಕೆ ಹೋಗದೆ ಸ್ನೇಹಿತರ ಜತೆ ಸುತ್ತಾಡುತ್ತ ಕೆಟ್ಟ ಚಟಗಳನ್ನು ಅಂಟಿಸಿಕೊಂಡಿದ್ದ. ಈ ಸಂಬಂಧ ತಂದೆ ಅಬ್ಟಾಸ್, ಪುತ್ರನಿಗೆ ಹತ್ತಾರು ಬಾರಿ ಬುದ್ಧಿವಾದ ಹೇಳಿದ್ದರು. ಭಾನುವಾರ ಬೆಳಗ್ಗೆ 11 ಗಂಟೆಯಾದರೂ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದ. ಅದೇ ವೇಳೆ ಮನೆಗೆ ಬಂದ ಅಬ್ಟಾಸ್, ಪುತ್ರನಿಗೆ ಇಂದು ಸಹ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದು ಏನು ಮಾಡುತ್ತಿಯಾ? ಕೆಲಸಕ್ಕೆ ಹೋಗವಂತೆ ಬೈದು ಬೇಸರಗೊಂಡು ಹಿರಿಯ ಮಗಳ ಮನೆಗೆ ಹೋಗಿದ್ದರು ಎಂದು ಪೊಲೀಸರು ಹೇಳಿದರು.
ನಂತರ ಅಡುಗೆ ಮನೆಯಲ್ಲಿ ತಿಂಡಿ ಮಾಡುತ್ತಿದ್ದ ತಾಯಿ ಬಳಿ ಹೋದ ಸಾಹಿಲ್, ಪದೇ ಪದೆ ಕೆಲಸಕ್ಕೆ ಹೋಗುವಂತೆ ನಿಂದಿಸುತ್ತಿದ್ದರೆ, ಸಾಯುತ್ತೇನೆ ಎಂದು, ಅಲ್ಲೇ ಇದ್ದ ಚಾಕುವಿ ನಿಂದ ಹೊಟ್ಟೆಗೆ ಇರಿದುಕೊಂಡಿದ್ದಾನೆ. ಶರ್ಟ್ ರಕ್ತಮಯವಾಗಿದ್ದು, ಸಣ್ಣ ಪ್ರಮಾಣದಲ್ಲಿ ಚುಕ್ಕಿಕೊಂಡಿಗೆ ಎಂದು ತಿಳಿದು, ಸೋಫಾ ಮೇಲೆ ಹೋಗಿ ಮಲಗಿದ್ದಾನೆ. ಹೊಟ್ಟೆ ಭಾಗದಿಂದ ರಕ್ತಸ್ರಾವವಾಗುತ್ತಿದ್ದರಿಂದ ತಾಯಿ ಪ್ಲಾಸ್ಟರ್ ಹಾಕಿದ್ದಾರೆ. ಈ ರೀತಿ ಮಾಡಬಾರದು ಎಂದು ಬುದ್ಧಿ ಹೇಳಿದ್ದಾರೆ. ಬಳಿಕ ಆತ ತಿಂಡಿ ತಿಂದಿದ್ದಾನೆ.
ಸುಮಾರು ಒಂದೂವರೆ ಗಂಟೆಗಳ ಬಳಿಕ ಆತನಿಗೆ ಹೊಟ್ಟೆ ನೋವು ಜೋರಾಗಿದ್ದು, ಕೂಗಾಟ ಆರಂಭಿಸಿದ್ದಾನೆ. ಆತಂಕಗೊಂಡ ತಾಯಿ, ಸಾಹಿಲ್ ಸ್ನೇಹಿತನನ್ನು ಕರೆಸಿಕೊಂಡು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.
ಸಾಹಿಲ್ ಈ ಹಿಂದೆಯೂ ಪೋಷಕರನ್ನು ಹೆದರಿಸಲು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೇಳುತ್ತಿದ್ದ. ಕೆಲ ಬಾರಿ ತಲೆಗೆ ಗ್ಲಾಸ್ ಹೊಡೆದುಕೊಳ್ಳುವುದು, ಕಾಲು ಕೂಯ್ದುಕೊಳ್ಳುವುದು ಮಾಡಿ ಹೆದರಿಸುತ್ತಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು. ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.