Advertisement
ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಹೆಡ್‌ಕಾನ್ಸ್‌ಟೆಬಲ್ ದೇವರಾಜ್ ಅವರು ಸೆ. 17ರಂದು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೆ. 19ರಂದು ಅವರನ್ನು ಜನರಲ್ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು. ಅವರು ಮಲಗಿದ್ದ ಬೆಡ್ ಪಕ್ಕದ ಟೇಬಲ್‌ನಲ್ಲಿ ಒಂದು ಆ್ಯಂಡ್ರಾಯ್ಡ ಮೊಬೈಲ್ ಹಾಗೂ ಒಂದು ಕೀಪ್ಯಾಡ್ ಮೊಬೈಲನ್ನು ಇಟ್ಟಿದ್ದರು.
ಅವರು ಯಾವುದೋ ಕಾರಣಕ್ಕೆ ಹೊರಗೆ ಹೋದ ಸಂದರ್ಭ ಒಳ ನುಗ್ಗಿದ್ದ ಕಳ್ಳ ಮೊಬೈಲ್ ಎಗರಿಸಿದ್ದಾನೆ. ಆತ ಮೊಬೈಲ್ ಫೋನ್ ಕದಿಯುವ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದ್ದು, ಪ್ರಸ್ತುತ ಆತನ ಫೋಟೊವನ್ನು ಆಸ್ಪತ್ರೆಯ ಮುಂಭಾಗದಲ್ಲಿ ಹಾಕಿ ಈತನನ್ನು ಕಂಡರೆ ತತ್‌ಕ್ಷಣ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ. ಕಳೆದ ವಾರ ವೃದ್ಧೆಯೊಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯೂ ಆಕೆಯ ಮೊಬೈಲ್ ಕಳ್ಳತನವಾಗಿದ್ದು, ಆ ವೇಳೆ ಆತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಜ್ಜಿಯನ್ನು ನೋಡುವುದಕ್ಕೆ ಇದೆ ಎಂದು ಅನುಮತಿ ಪಡೆದು ಒಳ ನುಗ್ಗಿದ್ದು, ಅಜ್ಜಿಯ ಬಳಿ ತುರ್ತಾಗಿ ಕರೆ ಮಾಡುವುದಕ್ಕೆ ಮೊಬೈಲ್ ಬೇಕು ಎಂದು ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಬಂಟ್ವಾಳ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಳ್ಳನ ಪತ್ತೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.