ಅಂಕೋಲಾ: ಯಾವುದೋ ಅಪರಿಚಿತ ವಾಹನವೊಂದು ಬಡಿದ ಪರಿಣಾಮ 2 ಆಕಳು ಮತ್ತೊಂದು ಕರು ದುರ್ಮರಣಕ್ಕೀಡಾದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ವಂದನಾ ಹೊಟೇಲ್ ಬಳಿ ನಡೆದಿದೆ.
ನಸುಕಿನ 4 ಗಂಟೆಯ ನಂತರ ಯಾವುದೋ ವಾಹನ ಬಡಿದಿರಬಹುದು ಎನ್ನಲಾಗಿದ್ದು ಅಪಘಾತದ ತೀವ್ರತೆಗೆ ಮೂರೂ ದನಗಳು ಸ್ಥಳದಲ್ಲೇ ಪ್ರಾಣ ಬಿಟ್ಟಿವೆ. ಒಂದು ಆಕಳು ಮತ್ತು ಕರು ಒಂದು ಕಡೆ ಬಿದ್ದಿದ್ದರೆ ಅಲ್ಲಿಂದ 20 ಅಡಿ ದೂರದಲ್ಲಿ ಇನ್ನೊಂದು ತುಂಬು ಗರ್ಭ ಹೊತ್ತ ಆಕಳು ಬಿದ್ದಿದೆ.
ಈ ದನಗಳು ಯಾರದ್ದೆಂದು ತಿಳಿದು ಬಂದಿಲ್ಲ. ಒಂದುವೇಳೆ ಸ್ಥಳೀಯರದ್ದಾಗಿರದಿದ್ದರೆ ಯಾವುದೋ ವಾಹನದಲ್ಲಿ ಸಾಗಿಸುತ್ತಿರುವಾಗ ಮೇಲಿಂದ ಬಿದ್ದಿರಬಹುದೇ ಎಂಬ ಅನುಮಾನವೂ ಬರಲಿದೆ. ದನಗಳು ಯಾವುದೇ ತರಚಿದ ಗಾಯಗಳಾಗಿರದೆ ಮೇಲಿಂದ ಬಿದ್ದು ಸತ್ತಿರುವಂತೆಯೂ ತೋರುತ್ತದೆ. ಎರಡು ವರ್ಷದ ಹಿಂದೆ ಪಿ.ಎಸ್.ಐ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲೆಯುವ ದನಗಳು ಚಾಲಕರಿಗೆ ಕಾಣಲೆಂದು ದನಗಳ ಕುತ್ತಿಗೆಗೆ ರೇಡಿಯಂ ರಿಫ್ಲೆಕ್ಟರ್ ಗಳನ್ನು ಅಳವಡಿಸಿದ್ದರು. ಅಲ್ಲಿಂದ ಹೆದ್ದಾರಿಯಲ್ಲಿ ದನಗಳ ಅಪಘಾತ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಇಂದಿನ ಘಟನೆ ಮತ್ತೆ ಹೆದ್ದಾರಿಯಲ್ಲಿ ಸಂಚರಿಸುವ ದನಗಳ ಬಗ್ಗೆ ಯೋಚಿಸುವಂತೆ ಮಾಡಿದೆ. ಹೆದ್ದಾರಿ ಸಮೀಪ ಮನೆಗಳಿದ್ದವರು ತಮ್ಮ ದನಗಳನ್ನು ರಾತ್ರಿಯ ವೇಳೆ ಕಟ್ಟಿಹಾಕಬೇಕು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ 1033 ಹೈವೇ ಪೆಟ್ರೋಲಿಂಗ್ ಸಿಬ್ಬಂದಿ ನವೀನ್ ಪಡ್ತಿ, ಭಾಗೇಶ ನಾಯ್ಕ, ಬಂಟಾ ನಾಯ್ಕ ಹಾಗೂ ಸಾಮಾಜಿಕ ಕಾರ್ಯಕರ್ತ ಸತೀಶ ನಾಯ್ಕ ಹನುಮಟ್ಟಾ, ಲಕ್ಷ್ಮೇಶ್ವರದ ಚಿನ್ನದಗರಿ ಯುವಕ ಸಂಘದವರು ಸಹಕರಿಸಿದರು. ಪುರಸಭೆಯ ಪೌರಕಾರ್ಮಿಕರು ದನದ ಕಳೇಬರವನ್ನು ಸಾಗಿಸಿದರು.