ಹಾವೇರಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವರದಾ ನದಿ ಮೈದುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಕಳಸೂರು, ನಾಗನೂರು, ಕೂಡಲ ಬ್ರಿಡ್ಜ್ ಕಂ ಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿರುವುದರಿಂದ ಕೆಲ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಗುರುವಾರ ರಾತ್ರಿಯಿಂದ ಎಡಬಿಡದೇ ಸಾಧಾರಣ ಮಳೆಯಾಗಿದೆ. ಶುಕ್ರವಾರ 12 ಗಂಟೆ ಬಳಿಕ ಮಳೆ ನಿಂತಿದ್ದು, ಆ ಬಳಿಕ ಅಲ್ಪ ಬಿಸಿಲು ಕೂಡ ಬಿದ್ದಿತ್ತು. ಆಗಾಗ ಮೋಡ ಕಡಿದು ಕೆಲವು ಕಡೆ ಜಿಟಿ ಜಿಟಿ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ ತೇವಗೊಂಡ ಅನೇಕ ಮನೆಗಳು ಹಾನಿಗೀಡಾಗಿವೆ.
ಕಳೆದ ಮೂರ್‍ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಹರಿದಿರುವ ವರದಾ, ಧರ್ಮಾ ನದಿಗಳು ತುಂಬಿ ಹರಿಯುತ್ತಿವೆ. ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ವರದಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಇದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ನೆರೆ ಭೀತಿ ಆವರಿಸಿದೆ. ತಾಲೂಕಿನ ನಾಗನೂರು, ಸವಣೂರು ತಾಲೂಕಿನ ಕಳಸೂರು, ಹಾನಗಲ್ಲ ತಾಲೂಕಿನ ಕೂಡಲ ಬ್ರಿಜ್ ಕಂ ಬ್ಯಾರೇಜ್ ಸಂಪೂರ್ಣ ಮುಳುಗಿದೆ.
ಇದರಿಂದ ಕೋಳೂರು, ಗಣಜೂರು ಮಾರ್ಗದ ಸಂಪರ್ಕ ಬಂದ್ ಆಗಿದೆ. ಹೊಸರಿತ್ತಿ, ಕರ್ಜಗಿ, ಕೂಡಲ, ವರ್ದಿ ಮುಂತಾದ ವರದಾ ನದಿ ತೀರದ ಹೊಲಗಳಿಗೆ ನೀರು ನುಗ್ಗಿದೆ. ಇತ್ತೀಚೆಗಷ್ಟೇ ಬಿತ್ತನೆ ಮಾಡಿದ್ದ ಬೆಳೆಗಳು ನೀರಿನಲ್ಲಿ ಮುಳುಗಿವೆ. ನದಿ ತೀರದ ಹೊಲಗಳಲ್ಲಿನ ಹತ್ತಿ, ಮೆಕ್ಕೆಜೋಳ ಮುಂತಾದ ಬೆಳೆಗಳು ಜಲಾವೃತಗೊಂಡು ಕೊಳೆಯುವ ಆತಂಕ ಎದುರಾಗಿದೆ. ಧರ್ಮಾ ಮತ್ತು ಕುಮದ್ವತಿ ನದಿಗಳು ಕೂಡ ತುಂಬಿ ಹರಿಯುತ್ತಿವೆ.
ಮಳೆ ಮುಂದುವರಿದರೆ ಪ್ರವಾಹ ಪರಿಸ್ಥಿತಿ ಎದುರಾಗುವ ಆತಂಕ ಎದುರಾಗಿದೆ. ಜಿಟಿ ಜಿಟಿ ಮಳೆಯಿಂದ ಗ್ರಾಮೀಣ ಭಾಗದ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಬಹುತೇಕ ಗ್ರಾಮೀಣ ರಸ್ತೆಗಳು ಹೊಂಡ ಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ. ನಗರ ಭಾಗದ ರಸ್ತೆಗಳೂ ರಾಡಿಮಯವಾಗಿವೆ.
ಮಳೆ ವಿವರ: ಕಳೆದ 24 ಗಂಟೆಗಳ ಅವಧಿಯಲ್ಲಿ ಹಾವೇರಿ ತಾಲೂಕಿನಲ್ಲಿ 16.4 ಮಿಮೀ, ರಾಣಿಬೆನ್ನೂರು 13.6ಮಿಮೀ, ಬ್ಯಾಡಗಿ 17ಮಿಮೀ, ಹಿರೇಕೆರೂರು 28.6ಮಿಮೀ, ರಟ್ಟಿಹಳ್ಳಿ 25.2ಮಿಮೀ, ಸವಣೂರು 22.5ಮಿಮೀ, ಶಿಗ್ಗಾವಿ 27.2ಮಿಮೀ ಹಾಗೂ ಹಾನಗಲ್ಲ ತಾಲೂಕಿನಲ್ಲಿ 65.2 ಮಿಮೀ ಮಳೆಯಾಗಿದೆ.