ಮುಂಬೈ: ವಾಣಿಜ್ಯ ನಗರಿ ಮುಂಬೈ ಶನಿವಾರ ಮತ್ತೆ ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದ್ದು, ಹಲವಾರು ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು, ಮುಂಬೈ-ಕೊಲ್ಲಾಪುರ ಎಕ್ಸ್ ಪ್ರೆಸ್ ಜಲಾವೃತದಿಂದಾಗಿ ಮಾರ್ಗ ಮಧ್ಯೆದಲ್ಲಿ ನಿಂತಿದ್ದು, 2000 ಸಾವಿರ ಪ್ರಯಾಣಿಕರು ಅತಂತ್ರ ಸ್ಥಿತಿಯಲ್ಲಿದ್ದು, ಅವರನ್ನು ಸುರಕ್ಷಿತವಾಗಿ ಕಳುಹಿಸಲು ಎನ್ ಡಿಆರ್ ಎಫ್ ಪಡೆ ಪ್ರಯತ್ನಿಸುತ್ತಿರುವುದಾಗಿ ವರದಿ ತಿಳಿಸಿದೆ.
ಭಾರೀ ಮಳೆಯಿಂದಾಗಿ 11 ವಿಮಾನಗಳ ಹಾರಾಟ ರದ್ದಾಗಿದ್ದು, ಸುಮಾರು 17 ವಿಮಾನಗಳು ಮುಂಬೈ ವಿಮಾನ ನಿಲ್ದಾಣದತ್ತ ಕಳುಹಿಸಲಾಗಿದೆ ಎಂದು ವರದಿ ವಿವರಿಸಿದೆ. ಥಾಣೆ, ಕಲ್ಯಾಣ್ ಸೇರಿದಂತೆ ಹಲವು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ರಕ್ಷಣಾ ಕಾರ್ಯಕ್ಕೆ ಎನ್ ಡಿಆರ್ ಎಫ್ ಪಡೆ ಆಗಮಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ರಾಯಗಢ, ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದ್ದ ಭಾರತದ ಹವಾಮಾನ ಇಲಾಖೆಯು ಮುಂಬಯಿ, ಥಾಣೆ ಮತ್ತು ನವಿ ಮುಂಬಯಿಯಲ್ಲೂ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿತ್ತು.
ಶುಕ್ರವಾರ ರಾತ್ರಿಯಿಂದಲೇ ಮುಂಬೈಯಲ್ಲಿ ಧಾರಾಕಾರ ಮಳೆ ಸುರಿಯತೊಡಗಿದೆ. ಥಾಣೆ ಮತ್ತು ಪಾಲ್ ಘರ್ ನಲ್ಲಿ ಭಾರೀ ಮಳೆಯಾಗಿರುವುದಾಗಿ ವರದಿ ಹೇಳಿದೆ. ಮಳೆ, ಜಲವೃತದಿಂದಾಗಿ ಸಿಲುಕಿಕೊಂಡಿರುವ ಜನರಿಗೆ ಆರ್ ಪಿಎಫ್ ಮತ್ತು ನಗರ ಪೊಲೀಸರು ಬಿಸ್ಕೆಟ್ ವಿತರಿಸುತ್ತಿದ್ದಾರೆ. ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಎನ್ ಡಿಆರ್ ಎಫ್ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.