Advertisement

ಗಡಿಯಲ್ಲಿ ನಿಲ್ಲದ ಪಾಕಿಸ್ಥಾನ, ಚೀನ ಮೊಂಡಾಟ

12:43 AM Sep 30, 2021 | Team Udayavani |

ಭಾರತದ ಪಾಲಿಗೆ ಬಲುದೊಡ್ಡ ಹೊರೆಯಾಗಿಯೇ ಪರಿಣಮಿಸಿರುವ ನೆರೆಯ ರಾಷ್ಟ್ರಗಳಾದ ಪಾಕಿಸ್ಥಾನ ಮತ್ತು ಚೀನ ನಿರಂತರವಾಗಿ ಗಡಿಯಲ್ಲಿ ತಮ್ಮ ಮೊಂಡಾಟವನ್ನು ತೋರುತ್ತಲೇ ಬಂದಿವೆ.

Advertisement

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ಭಾರತದಿಂದ ಮುಖಭಂಗಕ್ಕೀಡಾಗುತ್ತಿರುವ ಹೊರತಾಗಿಯೂ ಈ ಎರಡೂ ರಾಷ್ಟ್ರಗಳು ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇವೆ. ಪಾಕಿಸ್ಥಾನ ಉಗ್ರರನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಕಾರ್ಯದಲ್ಲಿ ನಿರತವಾಗಿದ್ದರೆ, ಚೀನದ ಯೋಧರು ಪದೇ ಪದೆ ಗಡಿ ಯಲ್ಲಿ ಭಾರತದ ಭೂಭಾಗದೊಳಗೆ ನುಸುಳಿ ಅಲ್ಲಿನ ಮೂಲಸೌಕರ್ಯ ಗಳನ್ನು ಹಾಳುಗೆಡವುತ್ತಿರುವುದಲ್ಲದೆ ಶಾಂತಿಗೆ ಭಂಗ ತಂದೊಡ್ಡುತ್ತಿದ್ದಾರೆ.

ಪಾಕಿಸ್ಥಾನವು ಉಗ್ರರನ್ನು ಗಡಿಯಲ್ಲಿ ಒಳನುಸುಳಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದು, ಭಾರತೀಯ ಸೇನಾ ಪಡೆಗಳು ಅವರನ್ನು ಸದೆಬಡಿಯುತ್ತಲೇ ಬಂದಿವೆ. ಇತ್ತೀಚಿನ ದಿನಗಳಲ್ಲಿ ಗಡಿಯಲ್ಲಿ ಉಗ್ರರಿಂದ ನುಸುಳುವಿಕೆ ಪ್ರಯತ್ನ ದಿನಂಪ್ರತಿ ಎಂಬಂತೆ ನಡೆಯುತ್ತಿದೆ. ಉಗ್ರರ ಹತ್ಯಾ ಸರಣಿ ಮುಂದುವರಿಯುತ್ತಿದ್ದರೂ ಪಾಕಿಸ್ಥಾನ ಮಾತ್ರ ತನ್ನ ಕುತಂತ್ರ ವನ್ನು ಬಿಡದೆ ನುಸುಳುಕೋರರಿಗೆ ಆಶ್ರಯ, ತರಬೇತಿ ನೀಡುವ ಕೆಲಸವನ್ನು ಮುಂದುವರಿಸಿದೆ. ಆದರೆ ಭಾರತೀಯ ಪಡೆಗಳು ಪಾಕಿಸ್ತಾನಿ ಸೇನೆಯ ಈ ಎಲ್ಲ ಷಡ್ಯಂತ್ರಗಳನ್ನು ಅರಿತುಕೊಂಡು ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ. ನುಸುಳುಕೋರರ ವಿರುದ್ಧದ ಕಾರ್ಯಾಚರಣೆ ವೇಳೆ ಓರ್ವ ಉಗ್ರನನ್ನು ಸೆರೆ ಹಿಡಿದಿರುವ ಭಾರತೀಯ ಪಡೆಗಳು ಆತನನ್ನು ವಶಕ್ಕೆ ತೆಗೆದುಕೊಂಡು ತೀವ್ರ ತನಿಖೆಗೊಳಪಡಿಸಿವೆ. ಈ ವೇಳೆ ಆತ ಪಾಕಿಸ್ಥಾನ ಸೇನೆಯ ಷಡ್ಯಂತ್ರ, ಕುಕೃತ್ಯಗಳ ಬಗೆಗಿನ ಸಂಪೂರ್ಣ ಮಾಹಿತಿ ಯನ್ನು ಬಾಯ್ಬಿಟ್ಟಿದ್ದು ಪಾಕಿಸ್ಥಾನದ ನರಿಬುದ್ಧಿಗೆ ಮತ್ತಷ್ಟು ಸಾಕ್ಷ್ಯಾಧಾರಗಳು ಲಭಿಸಿವೆ. ಕೆಲವೊಂದು ತಿಂಗಳುಗಳಿಂದೀಚೆಗೆ ಒಂದಿಷ್ಟು ತಣ್ಣಗಾಗಿದ್ದ ಚೀನ ಸೇನೆ ಮತ್ತೆ ತನ್ನ ಬಾಲ ಬಿಚ್ಚಲಾರಂಭಿಸಿದೆ. ತಿಂಗಳ ಹಿಂದೆ ಚೀನ ಯೋಧರು ಉತ್ತರಾಖಂಡದ ಬಾರಾಹೋತಿಯಲ್ಲಿರುವ ಗಡಿ ಪ್ರದೇಶಕ್ಕೆ ನುಸುಳಿ ಸುಮಾರು ಮೂರು ತಾಸು ಅಲ್ಲಿ ಠಿಕಾಣಿ ಹೂಡಿದ್ದೇ ಅಲ್ಲದೆ ಅಲ್ಲಿದ್ದ ಕಾಲ್ಸೇತುವೆಯನ್ನು ಧ್ವಂಸಗೈದು ಹೋಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಸ್ವಾತಂತ್ರ್ಯ ಹೋರಾಟಕ್ಕೂ ಸಿದ್ದರಾಮಯ್ಯರಿಗೂ ಏನು ಸಂಬಂಧ: ಆರಗ ಪ್ರಶ್ನೆ

ಭಾರತೀಯ ಪಡೆಗಳು ಆ ಪ್ರದೇಶಕ್ಕೆ ಧಾವಿಸುವಷ್ಟರಲ್ಲಿ ಚೀನಿ ಯೋಧರು ಅಲ್ಲಿಂದ ಕಾಲ್ಕಿತ್ತಿದ್ದರು ಎಂಬ ಮಾಹಿತಿ ಬಯಲಾಗಿದೆ. ಗಡಿ ಭಾಗದಲ್ಲಿ ಚೀನ ಸೇನೆ ಅತ್ಯಂತ ರಹಸ್ಯವಾಗಿ ಸೇನಾ ಮೂಲಸೌಕರ್ಯಗಳ ನಿರ್ಮಾಣ ಕಾರ್ಯ ನಡೆಸುವ ಮೂಲಕ ಗಡಿ ಪ್ರದೇಶದಲ್ಲಿ ಉದ್ವಿಗ್ನತೆಯ ವಾತಾವರಣ ಸೃಷ್ಟಿಸುತ್ತಿದೆ.

Advertisement

ಪ್ರಧಾನಿ ಮೋದಿ ಅವರು ತಮ್ಮ ಇತ್ತೀಚಿನ ಅಮೆರಿಕ ಪ್ರವಾಸದ ವೇಳೆ ಪಾಲ್ಗೊಂಡಿದ್ದ ಕ್ವಾಡ್‌ ಶೃಂಗಸಭೆ, ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲೂ ಚೀನ ಮತ್ತು ಪಾಕಿ ಸ್ಥಾ ನದ ಈ ನಿಲುವುಗಳ ಕುರಿತಂತೆ ಪರೋಕ್ಷವಾಗಿ ಪ್ರಸ್ತಾವಿಸಿ ಅವುಗಳ ವಿರುದ್ಧ ಕಿಡಿಕಾರಿದ್ದರು. ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಪಾಕ್‌ ಪ್ರಧಾನಿ ಇಮ್ರಾನ್‌ಖಾನ್‌ ಮತ್ತೆ ಕೆದಕಿದ ಸಂದರ್ಭದಲ್ಲಿ ಭಾರತದ ಪ್ರತಿನಿಧಿ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಮೂಲಕ ಪಾಕಿಸ್ಥಾನದ ಮುಖವಾಡವನ್ನು ಕಳಚುವಲ್ಲಿ ಯಶಸ್ವಿಯಾಗಿದ್ದರು. ಇವೆಲ್ಲದರ ಹೊರತಾಗಿಯೂ ಚೀನ ಮತ್ತು ಪಾಕಿಸ್ಥಾನ ಅನಾವಶ್ಯಕವಾಗಿ ಗಡಿಯಲ್ಲಿ ತಕರಾರು ತೆಗೆಯುವ ಮೂಲಕ ಈ ಭಾಗದ ಮಾತ್ರವಲ್ಲದೆ ಇಡೀ ವಿಶ್ವದ ಶಾಂತಿಗೆ ಭಂಗ ತರುತ್ತಿರುವುದು ತೀರಾ ಆತಂಕಕಾರಿ ಬೆಳವಣಿಗೆಯಾಗಿದೆ. ಈ ಎರಡೂ ರಾಷ್ಟ್ರಗಳಿಗೆ ಜಾಗತಿಕ ಸಮುದಾಯ ಕಠಿನ ಸಂದೇಶವನ್ನು ರವಾನಿಸಲೇಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next