Advertisement
ಇದೊಂದು ಹಗರಣ: ಸರ್ಕಾರಿ ಕಚೇರಿಗಳಿಗೆ ಹೊರ ಗುತ್ತಿಗೆ ಸೇವೆ ಪಡೆಯುವುದು ಒಂದು ದೊಡ್ಡ ಹಗರಣವಾಗಿದೆ. ಕಾರ್ಮಿಕ ಇಲಾಖೆಯ ನಿಯಮಾವಳಿ ಪ್ರಕಾರ, ಹೊರ ಗುತ್ತಿಗೆಯಡಿ ನೇಮಕಗೊಳ್ಳುವ ಸಿಬ್ಬಂದಿಗೆ ಕಡ್ಡಾಯವಾಗಿ ಇಎಸ್‌ಐ, ಪಿಎಫ್ ನೀಡಬೇಕು. ಕನಿಷ್ಠ ವೇತನ ನಿಗದಿ ಮಾಡಬೇಕು ಎಂಬ ನಿಯಮಗಳಿವೆ. ಆದರೆ, ಬಹುತೇಕ ಸಂಸ್ಥೆಗಳು, ಅದನ್ನು ಪಾಲಿಸುವುದಿಲ್ಲ ಎಂಬ ಆರೋಪ ಕೇಳಿ ಬರುತ್ತಲೇ ಇದೆ.
Related Articles
Advertisement
ಮೇಘಾ ಮ್ಯಾನ್ ಪಾವರ್ ಏಜೆನ್ಸಿ ಕಂಡರೆ ಜಿಲ್ಲೆಯ ಕೆಲ ಅಧಿಕಾರಿಗಳಿಗೂ ಕಾಳಜಿ. ಸಂಸ್ಥೆ ಪೂರೈಸುವ ಗುತ್ತಿಗೆ ನೌಕರರಿಗೆ ಇಲಾಖೆಯಿಂದ ನೇರವಾಗಿ ವೇತನ ಕೊಡಲ್ಲ. ಬದಲಾಗಿ, ಸಂಸ್ಥೆಗೆ ಪಾವತಿಸಲಾಗುತ್ತದೆ. ಈ ಸಂಸ್ಥೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಈ ವರ್ಷ ಶೇ.7 ಗುತ್ತಿಗೆ ಮೊತ್ತ ಪಾವತಿಸಲಾಗಿದೆ ಎಂದು ತಿಳಿದು ಬಂದಿದೆ.
ಶೇ.1 ಕಡಿಮೆ ಗುತ್ತಿಗೆ ಹಾಕಿದ್ದ ಸಂಸ್ಥೆಯನ್ನು ಯಾವುದೋ ಕಾರಣವೊಡ್ಡಿ ಕೈಬಿಟ್ಟ ಆರೋಗ್ಯ ಇಲಾಖೆ, ಶೇ.7ರಷ್ಟು ಹೆಚ್ಚಿನ ಟೆಂಡರ್ ಹಾಕಿದ್ದ ಸಂಸ್ಥೆಗೆ ಗುತ್ತಿಗೆ ಕೊಟ್ಟಿದೆ. ಇದು ಜಿಲ್ಲೆಯಲ್ಲೇ ಅತಿ ಹೆಚ್ಚು ಗುತ್ತಿಗೆಯ ಕಮೀಷನ್ ಪಡೆದ ಸಂಸ್ಥೆ ಎನ್ನಲಾಗಿದೆ.
ನೌಕರಿಗೆ ಸೇರಿಸಲು ಹಣ ವಸೂಲಿ: ಖಾಸಗಿ ಏಜೆನ್ಸಿಯವರು, ನೌಕರರನ್ನು ಪಡೆಯುವ ವೇಳೆ, ಸರ್ಕಾರಿ ಕಚೇರಿಯಲ್ಲಿ ನಿಮಗೆ ಗುತ್ತಿಗೆ ಆಧಾರಿತ ನೌಕರಿ ದೊರೆಯಲಿದೆ. ಗುತ್ತಿಗೆ ಆಧಾರಿತ ಅಂದ ಮೇಲೆ ಇಂದಲ್ಲ-ನಾಳೆ ಕಾಯಂ ಆಗುತ್ತವೆ. ಹೀಗಾಗಿ ನಮ್ಮ ಸಂಸ್ಥೆಗೆ ಇಷ್ಟು ಹಣ ಕೊಡಿ. ನಾವು ನೇಮಕ ಮಾಡಿಕೊಳ್ಳುತ್ತೇವೆ ಎಂಬ ಷರತ್ತು ಹಾಕಲಾಗುತ್ತದೆ. ಒಮ್ಮೆ ಸರ್ಕಾರಿ ಕಚೇರಿಗಳಲ್ಲಿ ಗುತ್ತಿಗೆಯಡಿ ನೌಕರಿಗೆ ಸೇರಿದರೆ, ಸಾಕು ಮುಂದೆ ಕಾಯಂ ಮಾಡಿಕೊಳ್ಳಬಹುದು ಎಂಬ ಆಲೋಚನೆಯಿಂದ ವಿದ್ಯಾವಂತರೂ 25 ಸಾವಿರದಿಂದ 1 ಲಕ್ಷದ ವರೆಗೆ ಹಣ ಕೊಟ್ಟ ಉದಾಹರಣೆಗಳು ಜಿಲ್ಲೆಯಲ್ಲಿವೆ. ಇದನ್ನು ಸ್ವತಃ ಕೆಡಿಪಿ ಸಭೆಯಲ್ಲಿ ಚರ್ಚೆಯಾಗಿ, ಡಿಸಿಎಂ ಕಾರಜೋಳ ಕೂಡ ಇದಕ್ಕೆ ಕಡಿವಾಣ ಹಾಕಲು ಸೂಚಿಸಿದ್ದರು.
ಸರ್ಕಾರಿ ಸಂಸ್ಥೆಗೆ ವಹಿಸಲು ಸೂಚನೆ: ಜಿಲ್ಲೆಯಲ್ಲಿ ಹೊರ ಗುತ್ತಿಗೆಯಡಿ ಸಿಬ್ಬಂದಿ ಪಡೆಯುವುದನ್ನು ಸರ್ಕಾರಿ ಅಧೀನದ ಕಿಯೋನಿಕ್ಸ್ ಸಂಸ್ಥೆಗೆ ವಹಿಸಲು ಚರ್ಚೆ ನಡೆದಿದೆ. ಇದು ಒಂದು ರೀತಿ ಭೂ ಸೇನಾ ನಿಗಮ ಅಥವಾ ನಿರ್ಮಿತಿ ಕೇಂದ್ರ ಇದ್ದಂತೆ. ಕಿಯೋನಿಕ್ಸ್ ಹೆಸರಿನಲ್ಲಿ ಹೊರ ಗುತ್ತಿಗೆ ನೌಕರರನ್ನು ಪೂರೈಕೆ ಮಾಡುವುದು, ಇಲಾಖೆಗಳು ಕಿಯೋನಿಕ್ಸ್‌ಗೆ ವಾರ್ಷಿಕ ಗುತ್ತಿಗೆ ಮೊತ್ತ ಪಾವತಿಸುವುದು ನಿಯಮ. ಆದರೆ, ಈ ಸಂಸ್ಥೆ ಶೇ.10 ಕಮೀಷನ್ ಪಡೆಯುತ್ತದೆ. ಅದರಲ್ಲಿ ಶೇ.5 ಇಎಸ್‌ಐ, ಪಿಎಫ್ ಪಾವತಿಸುತ್ತದೆ.
ಅದೇ ಖಾಸಗಿಯವರಾದರೆ ಶೇ.1ರಿಂದ 8ರ ವರೆಗೆ ಟೆಂಡರ್ ಹಾಕುತ್ತಿದ್ದರು. ಕಿಯೋನಿಕ್ಸ್‌ಗೆ ವಹಿಸಿದರೆ, ಸರ್ಕಾರಕ್ಕೆ ಹೆಚ್ಚಿನ ಹೊರೆ ಹೊರತು, ಉಳಿತಾಯವಾಗಲ್ಲ. ಆದರೆ, ವಿದ್ಯಾವಂತರಿಂದ ನೌಕರಿ ಕೊಡುವ ಆಮಿಷವೊಡ್ಡಿ ಹಣ ವಸೂಲಿ ಮಾಡುವುದು ತಪ್ಪುತ್ತದೆ ಎಂಬುದು ಇಲಾಖೆಯೊಂದರ ಅಧಿಕಾರಿಯ ಅಭಿಪ್ರಾಯ. ಕಿಯೋನಿಕ್ಸ್ ಸಂಸ್ಥೆಗೆ ಹೊರ ಗುತ್ತಿಗೆ ಕೊಟ್ಟರೂ ಅದು ಉಪ ಗುತ್ತಿಗೆ ಕೊಡುತ್ತದೆ. ಆ ಉಪ ಗುತ್ತಿಗೆಯನ್ನು ರಾಜಕೀಯ ಪ್ರಭಾವ ಇರುವವರೇ ಪಡೆಯುತ್ತಾರೆ. ಮತ್ತದೇ ಹಳೆಯ ಪದ್ಧತಿ ಶುರುವಾಗುತ್ತದೆ. ಇದರಲ್ಲಿ ಜಿಲ್ಲಾಡಳಿತದ ಮೂಲ ಉದ್ದೇಶ ಈಡೇರಲ್ಲ.
ನಮ್ಮ ಜಿಲ್ಲೆಯ ಯಾವುದೇ ಇಲಾಖೆಗೆ ಹೊರ ಗುತ್ತಿಗೆ ನೌಕರನ್ನು ಖಾಸಗಿ ಏಜೆನ್ಸಿಗಳಿಂದ ಪಡೆಯದಂತೆ ಸೂಚಿಸಲಾಗಿದೆ. ಕಿಯೋನಿಕ್ಸ್ ಅಥವಾ ಸರ್ಕಾರಿ ಅಧೀನದ ಇನ್ಯಾವುದೇ ಸರ್ಕಾರಿ ಸಂಸ್ಥೆಯ ಮೂಲಕ ಗುತ್ತಿಗೆ ನೌಕರರನ್ನು ಪಡೆಯುವ ಕುರಿತು ಚರ್ಚೆ ನಡೆದಿದೆ. ಈ ಕುರಿತು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. –ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿ
-ಶ್ರೀಶೈಲ ಕೆ. ಬಿರಾದಾರ