Advertisement

ಕಾಫಿನಾಡಲ್ಲಿ ನಿಲ್ಲದ ಭಾರೀ ಮಳೆ

02:38 PM May 20, 2022 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಗುರುವಾರವು ಬೆಳಗ್ಗೆಯಿಂದ ಸಂಜೆವರೆಗೂ ಜಿಲ್ಲಾದ್ಯಂತ ನಿರಂತರ ಮಳೆಯಾಗಿದೆ. ಮಳೆಯಿಂದ ಮನೆಗಳಿಗೆ ಹಾನಿ ಯಾಗಿದೆ. ರಸ್ತೆ ಮೇಲೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು. ವಿದ್ಯುತ್‌ ಕಂಬಗಳು ನೆಲಕ್ಕುರುಳಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಹಳ್ಳ- ಕೊಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದೆ.

Advertisement

ಹವಾಮಾನ ವೈಪರೀತ್ಯದಿಂದ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕಳೆದೆರೆಡು ದಿನಗಳಿಂದ ಸುರಿದ ಭಾರೀ ಮಳೆಗೆ 7ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. 2 ಹಸುಗಳು ಮೃತಪಟ್ಟಿವೆ.

ಬುಧವಾರ ಬೆಳಗ್ಗೆಯಿಂದ ಜಿಲ್ಲಾದ್ಯಂತ ಎಡೆಬಿಡದೆ ಮಳೆಯಾಗುತ್ತಿದ್ದು, ಗುರುವಾರ ಮುಂದುವರಿದಿತ್ತು. ಬಯಲು ಸೀಮೆ ವ್ಯಾಪ್ತಿಯಲ್ಲೂ ಎಡೆಬಿಡದೆ ಮಳೆಯಾಗಿದೆ. ಭಾರೀ ಗಾಳಿ- ಮಳೆಗೆ ಮೂಡಿಗೆರೆ ತಾಲೂಕು ಮರ್ಕಲ್‌ ಗ್ರಾಮದ ಕಾಫಿ ತೋಟವೊಂದರಲ್ಲಿ ಹಸುವಿನ ಮೇಲೆ ಮರಬಿದ್ದು ಸ್ಥಳದಲ್ಲೇ ಮೃತಪಟ್ಟಿದೆ. ಕೂವೆ ಮಾಳಿಂಗನಾಡು ಗ್ರಾಮಗಳ ಸಂಪರ್ಕ ರಸ್ತೆಯಲ್ಲಿ ಬೃಹತ್‌ ಗಾತ್ರದ ಮರ ಬಿದ್ದು ಸಂಪರ್ಕ ಕಡಿತಗೊಂಡಿತ್ತು. ಸ್ಥಳೀಯರು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕೂವೆ ಗ್ರಾಮ ಸಮೀಪದ ನೀಡನಹಳ್ಳಿ ಗ್ರಾಮದ ಸುರೇಶ್‌ ಎಂಬುವರ ಮನೆ ಮುಂದೆ ನಿರ್ಮಿಸಿದ್ದ ಕಾಂಪೌಂಡ್‌ ಕುಸಿದು ಬಿದ್ದಿದೆ. ಕಳಸ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಧಾರಾಕಾರ ಮಳೆಯಾಗಿದೆ. ಕೂಲಿ ಕಾರ್ಮಿಕರು ಮಳೆಯಿಂದ ಮನೆಯಲ್ಲೇ ಉಳಿದುಕೊಳ್ಳುವಂತಾಗಿದೆ.

Advertisement

ಮಲೆನಾಡು ಭಾಗದ ಸುರಿದ ಮಳೆಯಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳು ಸೇರಿದಂತೆ ಹಳ್ಳಕೊಳ್ಳಗಳಲ್ಲಿ ನೀರಿನ ಹರಿವು ಏರಿಕೆಯಾಗಿದೆ. ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಭಾರೀ ಮಳೆ ಮುಂದುವರಿದಲ್ಲಿ ಕಳಸ-ಹೆಬ್ಟಾಳೆ ಸಂಪರ್ಕದ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.

ಚಿಕ್ಕಮಗಳೂರು ನಗರದಲ್ಲಿ ಬುಧವಾರ ಬೆಳಗ್ಗೆಯಿಂದ ಗುರುವಾರ ಸಂಜೆವರೆಗೂ ಸಾಧಾರಣ ಮಳೆ ನಿರಂತರವಾಗಿ ಸುರಿಯುತ್ತಿದ್ದು, ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದಾಗಿ ಹಲವು ಬಡಾವಣೆಗಳ ರಸ್ತೆಗಳು ಕೆಸರುಮಯಗೊಂಡಿವೆ. ಮಳೆಯ ಪರಿಣಾಮ ಜಿಲ್ಲೆಯತ್ತ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಜಿಲ್ಲಾದ್ಯಂತ ಮೋಡ ಕವಿದ ವಾತಾವರಣವಿದ್ದು ಮಳೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಿಲ್ಲಾದ್ಯಂತ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ.

ಮಳೆಯ ಹಿನ್ನಲೆಯಲ್ಲಿ ಜಿಲ್ಲಾಡಳಿತ ಶಾಲೆಗಳಿಗೆ ರಜೆ ಘೋಷಿಸದಿದ್ದರೂ ಸ್ಥಳೀಯವಾಗಿ ಮಳೆಯ ಪ್ರಮಾಣ ಆಧರಿಸಿ ಆಯಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next