Advertisement

ಡಿಜಿಟಲ್‌ ಪಾವತಿಗೆ ಪ್ರೋತ್ಸಾಹ

11:05 PM Jul 05, 2019 | Lakshmi GovindaRaj |

ನೇರ ಹಣದ ವಹಿವಾಟನ್ನು ತಗ್ಗಿಸಿ ಡಿಜಿಟಲ್‌ ಇಂಡಿಯಾಕ್ಕೆ ಒತ್ತುಕೊಡುತ್ತಾ ಬಂದಿರುವ ಮೋದಿ ಸರ್ಕಾರ ಈ ಬಾರಿಯೂ ಅದೇ ದಿಕ್ಕಿನಲ್ಲಿ ಹೆಜ್ಜೆಯಿಟ್ಟಿದೆ. ಡಿಜಿಟಲ್‌ ಪಾವತಿಗಳನ್ನು ಮತ್ತಷ್ಟು ಪ್ರೋತ್ಸಾಹಿಸುವುದಕ್ಕಾಗಿ , ವಾರ್ಷಿಕವಾಗಿ 1 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ನಗದು ಹಿಂಪಡೆಯುವಿಕೆಯ ಮೇಲೆ 2 ಪ್ರತಿಶತ ಟಿಡಿಎಸ್‌ ವಿಧಿಸುವ ಪ್ರಸ್ತಾಪವಿಟ್ಟಿದ್ದಾರೆ.

Advertisement

ಭೀಮ್‌ ಯುಪಿಐ, ಯುಪಿಐ-ಕ್ಯೂಆರ್‌ ಕೋಡ್‌, ಆಧಾರ್‌ ಪೇ, ಎನ್‌ಇಎಫ್ಟಿ, ಆರ್‌ಟಿಜಿಎಸ್‌ನಂಥ ಕಡಿಮೆ ದರದ ಡಿಜಿಟಲ್‌ ಪಾವತಿ ಮಾರ್ಗಗಳೂ ಇರುವುದರಿಂದಾಗಿ, ವಾರ್ಷಿಕವಾಗಿ 50 ಕೋಟಿಗೂ ಅಧಿಕ ವಹಿವಾಟು ನಡೆಸುವ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಈ ರೀತಿಯ ಕಡಿಮೆ ದರದ ಡಿಜಿಟಲ್‌ ಪಾವತಿ ಮಾರ್ಗಗಳ ವ್ಯವಸ್ಥೆ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಆದಾಯ ತೆರಿಗೆ ಕಾಯ್ದೆ ಹಾಗೂ ಪಾವತಿ ಮತ್ತು 2007ರ ಸೆಟಲ್‌ಮೆಂಟ್‌ ವ್ಯವಸ್ಥೆ ಕಾಯ್ದೆಯಲ್ಲಿ ಸೂಕ್ತ ಬದಲು ಮಾಡುವ ಬಗ್ಗೆಯೂ ಸರ್ಕಾರ ಇರಾದೆ ಹೊಂದಿದೆ.

ಹೊಸ ವ್ಯವಸ್ಥೆ: ಮೂಲ ಸೌಕರ್ಯ ಕ್ಷೇತ್ರಗಳಿಗೆ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಹಲವು ವಿಶಿಷ್ಟ ಹಣಕಾಸು ವ್ಯವಸ್ಥೆಗಳನ್ನು 4 ವರ್ಷಗಳಲ್ಲಿ ಜಾರಿ ಮಾಡಲಾಗಿದೆ. ಮೂಲಸೌಕರ್ಯ ಬಂಡವಾಳ ಟ್ರಸ್ಟ್‌ (InvITs), ರಿಯಲ್‌ ಎಸ್ಟೇಟ್‌ ಬಂಡವಾಳ ಟ್ರಸ್ಟ್‌ (REITs), ಟೋಲ್‌ ನಿರ್ವಹಣೆ ವರ್ಗಾ ವಣೆ (ToT)ಯಂಥ ವ್ಯವಸ್ಥೆ ಜಾರಿ ಮಾಡಲಾಗಿದೆ. ಇದರಿಂದ‌ ಮೂಲ ಸೌಕರ್ಯ ನಿರ್ಮಾಣ ಕ್ಷೇತ್ರಕ್ಕೆ ಅನುಕೂಲವಾಗಿದೆ. ಖರೀದಿ ಮತ್ತು ವಿಲೀನ ಪ್ರಕ್ರಿಯೆ ಮೂಲಕ ಆಸ್ತಿ ನಿರ್ವಹಣೆಯೂ ನಡೆದಿದೆ. ಭಾರತದಲ್ಲಿ ಬ್ರೌನ್‌ಫೀಲ್ಡ್‌ ಎಂದು ವಿಶ್ಲೇಷಿಸಲಾಗುವ ಈ ವ್ಯವಸ್ಥೆ ಸೀಮಿತ ಯಶಸ್ಸು ಹೊಂದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಟೋಲ್‌ ನಿರ್ವಹಣೆ ವರ್ಗದಿಂದ 24 ಸಾವಿರ ಕೋಟಿ ರೂ. ಸಂಗ್ರಹಿಸಿದೆ.

ಹೊಸ ನಾಣ್ಯಗಳು: ಹೊಸ ಮಾದರಿಯ ನಾಣ್ಯಗಳು ಬರಲಿವೆ. ಇದುವರೆಗೆ ದೃಷ್ಟಿ ವಿಕಲ ಚೇತನರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಿರುವಂತೆ ಅವುಗಳನ್ನು ಟಂಕಿಸಲಾಗುತ್ತದೆ. ಒಂದು, ಎರಡು, ಐದು, ಹತ್ತು ಮತ್ತು ಇಪ್ಪತ್ತು ರೂಪಾಯಿಗಳ ನಾಣ್ಯಗಳು ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. ಈ ವರ್ಷದ ಮಾ.7ರಂದು ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದು, ಎರಡು, ಐದು, ಹತ್ತು, ಇಪ್ಪತ್ತು ರೂ. ಮೌಲ್ಯದ ನಾಣ್ಯ ಅನಾವರಣ ಮಾಡಿದ್ದರು.

ಹೈಕಮಿಷನ್‌ ಸ್ಥಾಪನೆ: ರಾಯಭಾರ, ಹೈಕಮಿಷನ್‌ ಕಚೇರಿಗಳು ಇಲ್ಲದ ಸ್ಥಳಗಳಲ್ಲಿ ಅವುಗಳನ್ನು ತೆರೆಯುವ ನಿರ್ಧಾರ ಪ್ರಕಟಿಸಲಾಗಿದೆ. ಈ ಮೂಲಕ ದೇಶದಲ್ಲಿ ದೃಢ ಸರ್ಕಾರ ಅಸ್ತಿತ್ವದಲ್ಲಿದೆ ಎಂಬ ಭಾವನೆ ಮೂಡಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರಭಾವಳಿ ವಿಸ್ತರಿಸುವ ಪ್ರಯತ್ನ ಮಾಡಲಾಗಿದೆ. ಆಫ್ರಿಕಾ ಖಂಡದಲ್ಲಿ 18 ರಾಜತಾಂತ್ರಿಕ ಕಚೇರಿಗಳನ್ನು ತೆರೆಯಲಾಗಿದೆ. 2019-20ರಲ್ಲಿ ನಾಲ್ಕು ಹೊಸ ರಾಯಭಾರ ಕಚೇರಿಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ರವಾಂಡ, ಡಿಜಿಬೌತಿ, ಈಕ್ವಟೋರಿಯಲ್‌ ಜಿನಿಯಾ, ರಿಪಬ್ಲಿಕ್‌ ಆಫ್ ಜಿನಿಯಾ, ಬರ್ಕಿನಾಫಾಸೋ ಗಳಲ್ಲಿ 2018-19ನೇ ಸಾಲಿನಲ್ಲಿ ರಾಯಭಾರ ಕಚೇರಿಗಳನ್ನು ತೆರೆಯಲಾಗಿದೆ.

Advertisement

ಕೂಡಲೇ ಆಧಾರ್‌: ವಿದೇಶಿಯರಿಗೆ ವೀಸಾ ಆನ್‌ ಅರೈವಲ್‌ ಇದ್ದಂತೆ, ಅನಿವಾಸಿ ಭಾರತೀಯರಿಗೆ ದೇಶಕ್ಕೆ ಕಾಲಿಟ್ಟ ಕೂಡಲೇ ಆಧಾರ್‌ ಕಾರ್ಡ್‌ ನೀಡಲಾಗುತ್ತದೆ. ಇದರಿಂದ ಅನಿವಾಸಿ ಭಾರತೀಯರು ಸ್ವದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಲು ಪ್ರೋತ್ಸಾಹದಾಯಕ ಮಾಡಲು ಅವರಿಗೆ ಶೀಘ್ರ ಆಧಾರ್‌ ನೀಡಲು ಕ್ರಮ ಘೋಷಣೆ ಮಾಡಲಾಗಿದೆ. ಸದ್ಯ ಅವರು 180 ದಿನಗಳ ಕಾಲ ಕಾಯಬೇಕಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next