ಬಳ್ಳಾರಿ: ರಾಜ್ಯದಲ್ಲಿ 42 ಸಾವಿರ ಜನ ಆಶಾಕಾರ್ಯಕರ್ತೆಯರಿದ್ದು ಅವರಲ್ಲಿ 13 ಸಾವಿರ ಆಶಾ ಕಾರ್ಯಕರ್ತೆಯರಿಗೆ ಈಗಾಗಲೇ ತಲಾ 3 ಸಾವಿರ ರೂ. ಪ್ರೋತ್ಸಾಹಧನ ವಿತರಿಸಲಾಗಿದೆ. ಉಳಿದವರಿಗೂ ನೀಡಲು ಕ್ರಮ ವಹಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಹೇಳಿದರು.
ಸಹಕಾರ ಇಲಾಖೆ ಮತ್ತು ಸಹಕಾರ ಸಂಘಗಳ/ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಸಾಂಕೇತಿಕವಾಗಿ 110 ಜನ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಿಸಿ ಅವರು ಮಾತನಾಡಿದರು.
ಕೋವಿಡ್-19ನ ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಬಿಸಿಲು-ಮಳೆಯನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದು, ಕೋವಿಡ್ ನಿಯಂತ್ರಣದಲ್ಲಿ ಅವರ ಪಾಲೂ ದೊಡ್ಡದಿದೆ. ಇವರ ಕಾರ್ಯ ಮನಗಂಡ ಸಿಎಂ ಯಡಿಯೂರಪ್ಪನವರು ಪ್ರೋತ್ಸಾಹಧನ ನೀಡಿ ನೈತಿಕ ಆತ್ಮಸ್ಥೈರ್ಯ ತುಂಬಲು ಸೂಚಿಸಿದ್ದರಿಂದ ಪ್ರೋತ್ಸಾಹಧನ ವಿತರಿಸಲಾಗುತ್ತಿದೆ ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ 2050 ಆಶಾ ಕಾರ್ಯಕರ್ತೆಯರಿದ್ದು, ಅವರಿಗೆ 61.50ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು. ಈಗಾಗಲೇ 1146 ಆಶಾಕಾರ್ಯಕರ್ತೆಯರಿಗೆ 34.38 ಲಕ್ಷ ರೂ. ಪ್ರೋತ್ಸಾಹಧನ ವಿತರಿಸಲಾಗಿದೆ. ಉಳಿದವರಿಗೂ ಶೀಘ್ರ ವಿತರಿಸಲಾಗುವುದು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ, ಕೋವಿಡ್ ವಿಷಯದಲ್ಲಿ ಆಶಾಗಳು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ. ಅವರ ವೇತನವನ್ನು ದುಪ್ಪಟ್ಟು ಮಾಡಬೇಕೆಂದು ಸಚಿವ ಸೋಮಶೇಖರ್ ಅವರಲ್ಲಿ ಮನವಿ ಮಾಡಿದರು. ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಮಾತನಾಡಿ, ಆಶಾ ಕಾರ್ಯಕರ್ತೆಯರು ನಿರ್ವಹಿಸುತ್ತಿರುವ ಸೇವೆ ಅನುಕರಣೀಯ ಎಂದರು.
ಸಹಕಾರ ಸಂಘಗಳ ಉಪನಿಬಂಧಕಿ ಡಾ| ಸುನೀತಾ ಸಿದ್ರಾಮ್ ಪ್ರಾಸ್ತಾವಿಕ ಮಾತನಾಡಿದರು. ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ರಾಜಶ್ರೀ ಅಗಸರ್, ಸಹಕಾರ ಸಂಘಗಳ ಜಂಟಿ ನಿಬಂಧಕಿ ಗೋಪಾಲ್ ಚವ್ಹಾಣ ಮತ್ತಿತರರು ಇದ್ದರು.